ಸುತ್ತೂರು ರಾಜೇಂದ್ರ ಶ್ರೀಗಳಿಂದ ಅಕ್ಷರ ಕ್ರಾಂತಿ

mysore
Published on

ಮೈಸೂರು: ಸುತ್ತೂರುಮಠದ ರಾಜೇಂದ್ರ ಶ್ರೀಗಳು ಗ್ರಾಮಾಂತರ ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳನ್ನು ತೆರೆದು ಅಕ್ಷರ ಕ್ರಾಂತಿ ಉಂಟು ಮಾಡಿದರು. ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು ಹಲವಾರು ಯೋಜನೆ ರೂಪಿಸಿದರು ಎಂದು ಮಂಗಳೂರು ಜಿಲ್ಲಾ ನ್ಯಾಯಾಧೀಶರಾದ ಎಚ್.ಎಸ್.ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.

ಜೆಎಸ್‌ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಗಂಗೋತ್ರಿ ಬಡಾವಣೆಯ ಶ್ರೀ ಶಿವರಾತ್ರಿ ರಾಜೇಂದ್ರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜೇಂದ್ರ ಶ್ರೀಗಳು ಸ್ವಾತಂತ್ರ್ಯ ಪೂರ್ವದಲ್ಲೇ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದರು. ಜತೆಗೆ, ಗ್ರಾಮಾಂತರ ಜನರ ಆರೋಗ್ಯಕ್ಕಾಗಿ ಆಸ್ಪತ್ರೆಯನ್ನು ತೆರೆದರು. ಧಾರ್ಮಿಕ ಗುರುಗಳಾಗಿ ಸಮಾಜಕ್ಕೆ ಹಲವಾರು ರೀತಿಯಲ್ಲಿ ಕೊಡುಗೆ ನೀಡಿದರು. ಸಮಾಜದ ಹಿತಕ್ಕಾಗಿ ಹಗಲಿರುಳು ದುಡಿದರು ಎಂದು ಸ್ಮರಿಸಿದರು.

ರಾಜೇಂದ್ರ ಶ್ರೀಗಳು ತ್ರಿವಿಧ ದಾಸೋಹದ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಈ ಮೂಲಕ ಎಲ್ಲರಿಗೂ ಸಮಾನ ಅವಕಾಶ ದೊರೆತು ಸಮಾನರಾಗಿ ಬದುಕುವ ಸನ್ನಿವೇಶ ಸೃಷ್ಟಿಸಬೇಕೆಂಬ ತತ್ವದ ಅಡಿಯಲ್ಲಿ ಸುತ್ತೂರು ಶ್ರೀಮಠ ಶಿಕ್ಷಣ, ಆರೋಗ್ಯ, ಅನ್ನ ದಾಸೋಹದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ.

ತನ್ಮೂಲಕ ಬಸವಾದಿ ಶರಣರು 12 ಶತಮಾನದಲ್ಲೇ ಅನುಷ್ಠಾನಗೊಳಿಸಿದ ಆಶಯವನ್ನು ಮುಂದುವರಿಸುತ್ತಿದೆ. ಇಂತಹ ಮಹತ್ಕಾರ್ಯಕ್ಕೆ ರಾಜೇಂದ್ರ ಶ್ರೀಗಳು ತಮ್ಮ ಜೀವನವನ್ನೇ ಮುಡುಪಾಗಿಟ್ಟರು ಎಂದರು.

ಸಂವಿಧಾನದ ಪ್ರಕಾರ ಸಹಿಷ್ಣುತೆ, ಸಹಬಾಳ್ವೆ ಆಚರಣೆಗೆ ಬರಬೇಕಿದ್ದರೆ ವೈಜ್ಞಾನಿಕ, ವೈಚಾರಿಕ ಶಿಕ್ಷಣ ನೀಡುವ ಇಚ್ಛಾಶಕ್ತಿ ಬೇಕು. ಅಂತಹ ಇಚ್ಛಾಶಕ್ತಿ ಶಿವರಾತ್ರಿ ರಾಜೇಂದ್ರ ಶ್ರೀಗಳಿಗೆ ಇತ್ತು. ಅವರಿಗೆ ಸಮಾಜದ ಬಗ್ಗೆ ದೂರದೃಷ್ಟಿ ಇತ್ತು. ಈ ಕಾರಣಕ್ಕೆ ಶಿಕ್ಷಣ ಮತ್ತು ಅಧ್ಯಾತ್ಮಿಕ ಸಂಸ್ಕಾರದಲ್ಲಿ ಸುತ್ತೂರು ಮಠ ಹೆಮ್ಮರವಾಗಿ ಬೆಳೆದಿದೆ ಎಂದರು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಲ್.ರೇವಣ ಸಿದ್ದಯ್ಯ, ಐಎಎಸ್ ಅಧಿಕಾರಿ ಶಿಲ್ಪಾ, ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net