ಸುತ್ತೂರು ಜಾತ್ರಾ ಮಹೋತ್ಸವ ಸಮಾಪ್ತಿ

DSC_0635
Published on

ಅವಿನಾಶ್ ಜೈನಹಳ್ಳಿ ಸುತ್ತೂರು ಧಾರ್ಮಿಕ ಸಭೆ, ವಸ್ತು ಪ್ರದರ್ಶನ, ಕೃಷಿ ಮೇಳ, ಮಹಾದಾಸೋಹ, ಸಾಮೂಹಿಕ ವಿವಾಹ, ದೋಣಿ ವಿಹಾರ, ಆರೋಗ್ಯ ತಪಾಸಣಾ ಶಿಬಿರ, ಚಿತ್ರಕಲೆ, ಗಾಳಿಪಟ ಸ್ಪರ್ಧೆ, ದನಗಳ ಜಾತ್ರೆ... ಅಷ್ಟೇ ಅಲ್ಲ ! ಮಾಸ ಶಿವರಾತ್ರಿಯಂದು ರಥೋತ್ಸವ ಹಾಗೂ ಮಾಘ ಶುದ್ಧ ಪಾಡ್ಯಮಿಯಂದು ತೆಪ್ಪೋತ್ಸವ ಜತೆಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆ..ಹೀಗೆ ಕಪಿಲಾ ನದಿ ತಟದ ಸುತ್ತೂರು ಶ್ರೀ ಕ್ಷೇತ್ರದಲ್ಲಿ 6 ದಿನಗಳ ಕಾಲ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸಿ, ಮನದಲ್ಲಿ ಭಕ್ತಿ -ಭಾವ ಬಿತ್ತುವುದರ ಜತೆಗೆ ಮಾಹಿತಿ ಕೋಶವಾಗಿ, ಮನರಂಜನೆ ಕೇಂದ್ರವಾಗಿ, ಸಾಮರಸ್ಯದ ತಾಣವಾಗಿದ್ದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಶುಕ್ರವಾರ ಸಮಾಪ್ತಿಗೊಂಡಿತು. ಸಾಮಾಜಿಕ ವ್ಯವಸ್ಥೆಯಲ್ಲಿ ಧಾರ್ಮಿಕ ಉತ್ಸವಗಳು ಸಮಾಜದಲ್ಲಿ ಸಾಮರಸ್ಯವನ್ನು ಗಟ್ಟಿಗೊಳಿಸುವ ಸದುದ್ದೇಶ ಹೊಂದಿದೆ ಎಂಬುವುದನ್ನು ಸುತ್ತೂರು ಜಾತ್ರೆ ಸಾಕ್ಷಿಕರಿಸಿತು. ಜಾತಿ, ಮತ, ಭಾಷೆ, ಪ್ರಾಂತ್ಯದ ಭೇದವನ್ನು ಮರೆತು ಜನ ಸಮ್ಮಿಳಿತಗೊಂಡಿದ್ದ ಜಾತ್ರೆಯಲ್ಲಿ ಭಕ್ತಿಭಾವದ ಜತೆಗೆ ಅರಿವು ದೊರೆಯಿತು. ಒಗ್ಗಟ್ಟು, ಸಾಮರಸ್ಯದ ಪ್ರದರ್ಶನವೂ ಆಯಿತು. ಧಾರ್ಮಿಕತೆಯ ಜತೆಗೆ ಕೃಷಿ, ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿಯ ಅನಾವರಣವೂ ಆಯಿತು. ಸಾಂಸ್ಕೃತಿಕ ಏಕತೆ ಹಾಗೂ ಸಾಮಾಜಿಕ ಜಾಗೃತಿಗೆ ನಾಂದಿಯಾಯಿತು. ಹತ್ತು ಹಲವು ವೈವಿಧ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವ ಕೃಷಿಕರ ಬದುಕು, ಕಷ್ಟ, ಸುಖಗಳನ್ನು ತೆರೆದಿಟ್ಟಿತು. ಆಧ್ಯಾತ್ಮ, ಧಾರ್ಮಿಕ ಪರಂಪರೆ, ಸಂಸ್ಕೃತಿಯೂ ಮೇಳೈಸುವಂತೆ ಮಾಡಿತು. ನೂರಾರು ವರ್ಷಗಳಿಂದ ಸುತ್ತೂರು ಶ್ರೀ ಮಠದ ನಡೆಸುತ್ತಿರುವ ಅಕ್ಷರ, ಅನ್ನ, ಜ್ಞಾನ ದಾಸೋಹದ ಮಹತ್ವವನ್ನು ಜಾತ್ರೆ ಮತ್ತೊಮ್ಮೆ ಇಡೀ ಜಗತ್ತಿಗೆ ತೋರಿಸಿತು.

ಜಾತ್ರೆಯಲ್ಲಿ ಲಕ್ಷಾಂತರ ಜನ ಭಾಗಿ

ಒಂದು ವಾರಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ 20 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗಿಯಾಗಿ ಭಜನಾ ಮೇಳ, ದೇಸಿ ಆಟ, ಸೋಬಾನೆ ಪದ, ರಂಗೋಲಿ ಸ್ಪರ್ಧೆ ಹಾಗೂ ಸುತ್ತೂರು ಜಾತ್ರಾ ನಾಟಕೋತ್ಸವಗಳನ್ನು ಯಶಸ್ವಿಗೊಳಿಸಿದ್ದಾರೆ. ವಿಶೇಷವಾಗಿ ರಥೋತ್ಸವ ಹಾಗೂ ತೆಪ್ಪೋತ್ಸವ ದಿನ ನಿರೀಕ್ಷೆಗೂ ಮೀರಿದ ಜನ ಭಾಗವಹಿಸಿದ್ದರು.

ದೇಸಿ ಆಟಗಳಾದ ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ, ಕುಂಟೆಬಿಲ್ಲೆ, ಅಳಗುಳಿಮನೆ, ಆಣೆಕಲ್ಲು, ಚದುರಂಗ, ಬುಗುರಿ, ಚೌಕಬಾರ, ಚೀಲ ಹೊತ್ತು ಓಡುವುದು, ಕಲ್ಲುಗುಂಡು ಎತ್ತುವುದು, ತುಂಬಿದ ಬಿಂದಿಗೆಯನ್ನು ತಲೆಯ ಮೇಲೆ ಹೊತ್ತು ಓಡುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಾತ್ರೆಗೆ ಒಂದು ಕಳೆ ನೀಡಿದರು.

10 ರಿಂದ 12 ಲಕ್ಷ ಭಕ್ತರಿಂದ ಪ್ರಸಾದ ಸ್ಪೀಕಾರ

ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಶ್ರೀ ಮಠ ಪ್ರಸಾದದ ವ್ಯವಸ್ಥೆ ಮಾಡಿತ್ತು. 6 ದಿನಗಳಲ್ಲಿ 10 ರಿಂದ 12 ಲಕ್ಷದಷ್ಟು ಭಕ್ತರು ಪ್ರಸಾದ ಸ್ಪೀಕರಿಸಿದ್ದಾರೆ ಎನ್ನಲಾಗಿದೆ. ಈ ವರ್ಷ ಸುಸ್ಥಿರ ಕೃಷಿಗಾಗಿ ನಿಖರ ಬೇಸಾಯ ತಾಂತ್ರಿಕತೆ ಶೀರ್ಷಿಕೆಯಡಿ ಸಾಂಪ್ರದಾಯಿಕ ಹಾಗೂ ಆಧುನಿಕ ತಂತ್ರಜ್ಞಾನಾಧಾರಿತ ಕೃಷಿ ಮೇಳ ಆಯೋಜಿಸಲಾಗಿತ್ತು. 4.5 ಲಕ್ಷ ಜನ ಕೃಷಿ ಮೇಳದಲ್ಲಿ ಭಾಗಿಯಾಗಿ ಒಂದು ಎಕರೆಯ ಕೃಷಿ ಬ್ರಹ್ಮಾಂಡ ಪ್ರಾತ್ಯಕ್ಷಿಕೆ, ನೆರಳು ಮನೆಯಲ್ಲಿ ಬೆಳೆದ ಹಲವಾರು ದೇಸಿ ಹಾಗೂ ವಿದೇಶಿ ತರಕಾರಿಗಳ ಪ್ರಾತ್ಯಕ್ಷಿಕೆ, ಏಕದಳ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ವಾಣಿಜ್ಯ ಬೆಳೆಗಳು, ಮೇವಿನ ಬೆಳೆಗಳು, ವಿವಿಧ ಫಲಪುಷ್ಪಗಳು, ತೋಟಗಾರಿಕೆ ಬೆಳೆಗಳು, ರೇಷ್ಮೆ ಕೃಷಿ ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅನುಸರಿಸಿ ಬೆಳೆದಿರುವ ಸುಮಾರು 300 ಬೆಳೆಗಳ ಪ್ರಾತ್ಯಕ್ಷಿಕೆ ವೀಕ್ಷಿಸಿ ಕೃಷಿ ಸಂಬಂಧಿಸಿದ ಅಪಾರ ಜ್ಞಾನ ಪಡೆದುಕೊಂಡರು.

ಜಾತ್ರೆಯ ಆರು ದಿನವೂ ಮುಖ್ಯಮಂತ್ರಿಗಳಿಂದ ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು, ಗಣ್ಯರು, ವಿವಿಧ ಮಠಗಳ ಮಠಾಧೀಶರು, ಸಾಹಿತಿಗಳ ಜತೆಗೆ ಸಾವಿರಾರು ಭಕ್ತರ ದಂಡೇ ಭಾಗಿಯಾಗಿತ್ತು.

ಭರ್ಜರಿ ವ್ಯಾಪಾರ

ಜಾತ್ರಾ ಮಹೋತ್ಸವದಲ್ಲಿ ಕೋಟ್ಯಂತರ ರೂ. ವ್ಯಾಪಾರ, ವಹಿವಾಟು ನಡೆದಿದ್ದು, ಜಾತ್ರೆ ಆರ್ಥಿಕ ಚಟುವಟಿಕೆ ಹೆಚ್ಚು ಅನುಕೂಲ ಕಲ್ಪಿಸಿದೆ. ಸಣ್ಣಪುಟ್ಟ ಬೀದಿ ವ್ಯಾಪಾರಿಗಳ ಪಾಲಿಗೂ ಸುಗ್ಗಿ ತಂದಿತು. ಸುತ್ತೂರು ಶ್ರೀ ಮಠದ ಆವರಣದಲ್ಲಿ ಒಂದು ವಾರ ಕಾಲ ಬೀಡುಬಿಟ್ಟಿದ್ದ ಸಣ್ಣ ವ್ಯಾಪಾರಿಗಳ ಆದಾಯ ಹೆಚ್ಚಿಸಿದೆ. ಕಡಲೆಪುರಿ, ಮಿಠಾಯಿ, ಖರ್ಜೂರ, ಮಕ್ಕಳ ಆಟದ ಸಾಮಾನುಗಳು, ಪೂಜಾ ಸಾಮಾನು ಸೇರಿದಂತೆ ಬೀದಿಬದಿಯ ವ್ಯಾಪಾರಿಗಳು ಒಂದು ತಿಂಗಳುಗಳ ಕಾಲ ಮಾಡುತ್ತಿದ್ದ ವ್ಯಾಪಾರವನ್ನು ಜಾತ್ರೆಯಲ್ಲಿ ಒಂದೇ ವಾರದಲ್ಲಿ ಮಾಡಿದ್ದಾರೆ.

ಶ್ರೀ ಮಠದಿಂದ 400ಕ್ಕೂ ಹೆಚ್ಚು ವ್ಯಾಪಾರದ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಅದಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಬೀದಿ ಬದಿಯ ವ್ಯಾಪಾರಿಗಳು ವ್ಯಾಪಾರ ನಡೆಸಿದ್ದಾರೆ. ದೇಶ ಹಾಗೂ ರಾಜ್ಯದ ಮೂಲೆ, ಮೂಲೆಗಳಿಂದ ಜಾತ್ರೆಯಲ್ಲಿ ಭಾಗಿಯಾಗಿಯಾಗಲು ಶ್ರೀ ಮಠದ ಭಕ್ತರು, ಸಾರ್ವಜನಿಕರು ಬಂದಿದ್ದರು. ಅವರು ಜಾತ್ರೆ ಸಂಭ್ರಮದಲ್ಲಿ ಮಿಂದೇಳುವುದರ ಜತೆಗೆ ಸಣ್ಣಪುಟ್ಟ ವ್ಯಾಪಾರಿಗಳ ಬಳಿ ವ್ಯಾಪಾರ ನಡೆಸಿ, ವ್ಯಾಪಾರಿಗಳ ಸಂಭ್ರಮ ಹೆಚ್ಚಿಸಿದ್ದಾರೆ.

ಬಟ್ಟೆಗಳು, ಟಿ ಶರ್ಟ್, ಪ್ಯಾಂಟ್, ಪುಸ್ತಕಗಳು, ಗೃಹೋಪಯೋಗಿ ವಸ್ತುಗಳು, ಕಿವಿಯೋಲೆ, ಬಳೆ, ಮನೆ ಅಲಂಕಾರಿಕ ವಸ್ತುಗಳು ಹೀಗೆ ಪ್ರತಿಯೊಂದು ವಸ್ತುಗಳನ್ನು ತಂದು ಮಾರಾಟ ಮಾಡಿದ್ದಾರೆ. ಜತೆಗೆ ವಿವಿಧ ಬಗೆಯ ಐಸ್‌ಕ್ರೀಂ, ತಂಪು ಪಾನೀಯಗಳು, ಪಾನೀಪುರಿ, ಗೋಬಿ, ಚಿಪ್ಸ್, ಚುರುಮುರಿ, ಸೌತೆಕಾಯಿ, ಕಡಲೆಕಾಯಿಗಳ ಸಣ್ಣಪುಟ್ಟ ವ್ಯಾಪಾರವೂ ಭರ್ಜರಿಯಾಗಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net