

ಆನಂದಪುರ: ಸುತ್ತಲಿನ ಪರಿಸರ ಮತ್ತು ಬದುಕಿನ ಸಂವೇದನೆಯೇ ಸಾಹಿತ್ಯ ಶಕ್ತಿಯಾಗಿ ಒಡಮೂಡುತ್ತದೆ ಎಂದು ಖ್ಯಾತ ಸಾಹಿತಿ ಹಾಗೂ ಕವಿ ಅರವಿಂದ ಚೊಕ್ಕಾಡಿ ತಿಳಿಸಿದರು.
ಭಾನುವಾರ ಇಲ್ಲಿಗೆ ಸಮೀಪದ ಯಡೇಹಳ್ಳಿಯಲ್ಲಿ ಸಾಗರ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಸಾಹಿತ್ಯ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೈಜ ಬದುಕಿನ ವಿವಿಧ ಮಜಲುಗಳನ್ನು ತೆರೆದಿಟ್ಟಾಗ ಸಾಹಿತ್ಯ ಅಥವಾ ಕವನ ಜನಪ್ರಿಯಗೊಳ್ಳುತ್ತದೆ. ಸಾಹಿತ್ಯ ಜನ ಜೀವನದ ಕೈಗನ್ನಡಿಯಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಕೆ.ಅರುಣ್ ಪ್ರಸಾದ್ ಬರೆದ ಚಂಪಕ ರಾಣಿ ಕಾದಂಬರಿ ಮತ್ತು ಭಟ್ಟರ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಪುಸ್ತಕಗಳ ಅವಲೋಕ ನುಡಿಗಳನ್ನಾಡಿ ಇವರ ಬರವಣೆಗೆ ಕಾಯಕ ಯಶಸ್ವಿಯಾಗಿದೆ ಎಂದರು.
ಕೆ.ಅರುಣ್ ಪ್ರಸಾದ್ ಮಾತನಾಡಿ, ಕವಿಗಳು, ಸಾಹಿತಿಗಳು ಮತ್ತು ವಿವಿಧ ಕ್ಷೇತ್ರದ ಮಹನೀಯರ ಒಡನಾಟ ಸಾಹಿತ್ಯ ಕೃಷಿಗೆ ಪ್ರೇರಣೆ ನೀಡುತ್ತಿದೆ ಎಂದರು.
ಸಾಗರ ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ಜನಸಾಮಾನ್ಯರಿಗೆ ಸಾಹಿತ್ಯ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಜಿಲ್ಲೆಯಾದ್ಯಂತ ಹೊಸ ಕವಿ ಮತ್ತು ಸಾಹಿತಿಗಳನ್ನು ಸೃಜಿಸುವ ಕಾರ್ಯ ನಡೆಯುತ್ತಿದ್ದು ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಹೇಳಿದರು.
ಖ್ಯಾತ ಸಾಹಿತಿ ಸುಭಾಷ್ ಚಂದ್ರ ಹಬ್ಬು ಮಾತನಾಡಿ, ನಮ್ಮ ಸಾಹಿತ್ಯ ಕುಟುಂಬಕ್ಕೆ ಮೂರು ತಲೆ ಮಾರಿನ ಇತಿಹಾಸವಿದ್ದು ನಮಗೆಲ್ಲ ನಮ್ಮ ತಂದೆಯ ಸಾಹಿತ್ಯ ಕೃಷಿಯೇ ಪ್ರೇರಣೆ ಒದಗಿಸಿದೆ ಎಂದರು.