ಸುಣ್ಣದ ಗುಮ್ಮಿ ಕಣಿವೆ ಸಮೀಪ ಸ್ಥಳಾಂತರಿಸಲು ನಿರ್ಧಾರ

Sunnada Gummi
Published on

ಚಿತ್ರದುರ್ಗ: ಜೋಗಿಮಟ್ಟಿ ರಸ್ತೆಯ ಅಗಳು ಪ್ರದೇಶದಲ್ಲಿರುವ ಎಂಟ್ಹತ್ತು ಸುಣ್ಣದ ಗುಮ್ಮಿಗಳ ಹೊಗೆಯಿಂದಾಗಿ ಬೇಸತ್ತ ಜನರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳೀಯರ ಅಹವಾಲು ಆಲಿಸಿ, ಸುಣ್ಣ ತಯಾರಕರೊಂದಿಗೆ ಚರ್ಚಿಸಿ, ಇಲ್ಲಿ ಉಂಟಾಗುತ್ತಿರುವ ತೊಂದರೆ ತಪ್ಪಿಸಲು ಕಣಿವೆ ಸಮೀಪ ಮೂರು ದಿನದೊಳಗೆ ಸ್ಥಳಾಂತರಿಸುವ ಭರವಸೆ ನೀಡಿದರು.

ಸ್ಥಳಾಂತರದ ಭರವಸೆ ಈಗಾಗಲೇ ಅನೇಕ ಬಾರಿ ಕೇಳಿದ್ದಾಗಿದೆ. ನಂತರ ಯಥಾಸ್ಥಿತಿ ಮುಂದುವರಿಯಲಿದೆ. ಹೀಗಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲವೆಂದು ಮಹಿಳೆಯರು ಅಳಲು ತೋಡಿಕೊಂಡರು. ತಯಾರಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ, ಸ್ಥಳಾಂತರಕ್ಕೆ ಸಿದ್ಧ ಎಂದು ಸುಣ್ಣ ತಯಾರಕ ಶಿವರುದ್ರಪ್ಪ ಹೇಳಿದರು.

ಜನಾಕ್ರೋಶಕ್ಕೆ ಕಾರಣವೇನು?

ಸುಣ್ಣದ ಗುಮ್ಮಿಯ ಹೊಗೆ ಇಲ್ಲಿನ ಜನರಿಗೆ ಕಂಟಕವಾಗಿ ಪರಿಣಮಿಸಿದೆ. ನಿತ್ಯ ಸಂಜೆ ವೇಳೆ ಸುತ್ತಮುತ್ತಲಿನ 1 ಕಿ.ಮೀ ವ್ಯಾಪ್ತಿಯಲ್ಲಿ ಆವರಿಸುವ ವಿಷಕಾರಿ ಹೊಗೆಯಿಂದ ಅಸ್ತಮಾ, ದೃಷ್ಟಿ ದೋಷ, ಶ್ವಾಸನಾಳ ಸಮಸ್ಯೆ ಸೇರಿ ಇನ್ನಿತರೆ ಅನಾರೋಗ್ಯ ತೊಂದರೆ ಅನುಭವಿಸುತ್ತಿದ್ದಾರೆಂದು ಭಾನುವಾರ ಸ್ಥಳೀಯರು ಆರೋಪಿಸಿದ್ದರು.

ಅಲ್ಲದೆ, ರೊಚ್ಚಿಗೆದ್ದ ಜನ ನಗರಸಭೆ ಸದಸ್ಯೆ ನಾಗಮ್ಮ ಮನೆ ಬಳಿ, ಸುಣ್ಣದ ಗುಮ್ಮಿ ಸ್ಥಳಕ್ಕೂ ತೆರಳಿ ಆಕ್ರೋಶ ಹೊರಹಾಕಿದ್ದರು. ಸುಣ್ಣದ ಗುಮ್ಮಿ ಊರ ಹೊರಭಾಗಕ್ಕೆ ಸ್ಥಳಾಂತರಿಸಬೇಕೆಂದು ಪಟ್ಟು ಹಿಡಿದರು.

ಇಲ್ಲಿ ವಾಸಿಸುವವರ ವಿವಾಹ ಸಂಬಂಧ ಹೆಣ್ಣು ಕೊಡುವುದು, ಬೇರೆಡೆಯಿಂದ ತರುವುದು ಕಷ್ಟಕರವಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಮಹೇಶ್ ಕಿಡಿಕಾರಿದರು. ಜಿಲ್ಲಾಡಳಿತ, ನಗರಸಭೆ, ಪರಿಸರ ಇಲಾಖೆಯ ನಿರ್ಲಕ್ಷವೇ ಇದಕ್ಕೆ ಪ್ರಮುಖ ಕಾರಣ. ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ವಿವೇಕಾನಂದ ನಗರದ ಸಾವಿರಾರು ಜನರಿಗೆ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯ ಸಿದ್ದೇಶ ಕೂಡ ದೂರಿದ್ದರು.

ಇದೇ ವೇಳೆ ಸುಣ್ಣದ ಗುಮ್ಮಿ ಕಾರ್ಮಿಕರು ಮತ್ತು ಸ್ಥಳೀಯರ ಮಧ್ಯೆ ಕೆಲಕಾಲ ವಾಗ್ವಾದ ಕೂಡ ನಡೆದಿತ್ತು. ನಗರಸಭೆ ಮಾಜಿ ಸದಸ್ಯ ಈರುಳ್ಳಿ ರಘು, ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ತಿಳಿಗೊಳಿಸಿದ್ದರು.

ಹೀಗಾಗಿ ಶಾಸಕರೊಟ್ಟಿಗೆ ತಹಸೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಸೇರಿ ವಿವಿಧ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net