ಸುಟ್ಟು ಕರಕಲಾದ ಟ್ರಾನ್ಸ್‌ಫಾರ್ಮರ್

Published on

ಬೇಲೂರು: ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ವಾಸದ ಮನೆಯ ಕೆಲವೇ ಅಡಿಗಳ ಅಂತರದಲ್ಲಿದ್ದ ವಿದ್ಯುತ್ ಪರಿವರ್ತಕ ಹಾಗೂ ಅದಕ್ಕೆ ಅಳವಡಿಸಿದ್ದ ವೈರ್‌ಗಳೆಲ್ಲ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.


ಅರೇಹಳ್ಳಿ ಹೋಬಳಿಯ ಬ್ಯಾದನೆ ಗ್ರಾಮದಲ್ಲಿ ಅಲೀಮಾ ಎಂಬುವರ ಮನೆಯ 5 ಅಡಿ ಅಂತರದಲ್ಲೇ ವಿದ್ಯುತ್ ಪರಿವರ್ತಕ ಅಳವಡಿಸಿದ್ದರಿಂದ ಮಳೆಗಾಲದಲ್ಲಿ ವಿದ್ಯುತ್ ಪ್ರವಹಿಸಿ ಮನೆಯವರು ಕೆಲ ದಿನ ಮನೆಯನ್ನೇ ತೊರೆದಿದ್ದರು. ಈ ಬಗ್ಗೆ ಅಂದಿನ ಸೆಸ್ಕ್ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಅಲ್ಲದೆ 100 ಕಿಲೋವಾಟ್ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಿ ಎಂದು ವರ್ಷದ ಹಿಂದೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿಯಿಂದ ಮನವಿ ಸಲ್ಲಿಸಿದರೂ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಆದ್ದರಿಂದ ವಾಸದ ಮನೆಯವರು ಜೀವ ಕೈಯಲ್ಲಿಡಿದು ಜೀವನ ನಡೆಸುತಿದ್ದರು. ಕೆಲವೊಮ್ಮೆ ಇದೇ ಪರಿವರ್ತಕದಿಂದ ಆಗಿಂದಾಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಘಟನೆಗಳು ನಡೆದಿವೆ. ಅಂತೆಯೆ, ಗುರುವಾರ ಮುಂಜಾನೆ 3 ಗಂಟೆ ಸಮಯದಲ್ಲಿ ವಿದ್ಯುತ್ ಪರಿವರ್ತಕ ಮತ್ತು ಅದಕ್ಕೆ ಅಳವಡಿಸಿದ್ದ ವೈರ್‌ಗಳೆಲ್ಲ ಸಿಡಿದು ಹೊತ್ತಿ ಉರಿದಿವೆ. ಪಕ್ಕದಲ್ಲೇ ಇದ್ದ ಮನೆಯವರು ಗಾಬರಿಯಿಂದ ಹೊರ ಬಂದು ನೋಡಿ ಗ್ರಾಮಸ್ಥರಿಗೆ ತಿಳಿಸಿ ಮನೆಯಿಂದ ಆಚೆ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಕಳೆದ ವರ್ಷವೇ ಈ ವಿದ್ಯುತ್ ಪರಿವರ್ತಕ ಸ್ಥಳಾಂತರಿಸಿ ಎಂದು ಹೇಳಿದ್ದರೂ ಗಮನಹರಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗೂ ಮೊದಲು ಆದಷ್ಟು ಬೇಗ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.

ನಮ್ಮ ಗ್ರಾಮದ ಅಲೀಮಾ ಎಂಬುವರ ಮನೆ ಮುಂದಿರುವ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸುವಂತೆ ನಾರ್ವೆ ಗ್ರಾಮ ಪಂಚಾಯಿತಿಯಿಂದ ಸೆಸ್ಕ್ ಕಚೇರಿಗೆ ಅರ್ಜಿ ಸಲ್ಲಿಸಿ ವರ್ಷವಾಗಿದೆ. ಅಲ್ಲದೆ ಅಧಿಕಾರಿಗಳೊಂದಿಗೆ ಮೌಖಿಕವಾಗಿಯೂ ಮಾತನಾಡಿದ್ದೇವೆ. ಆದರೂ ಅವರು ಕ್ರಮ ಕೈಗೊಂಡಿರಲಿಲ್ಲ. ಅಕಸ್ಮಾತ್ ಪಕ್ಕದಲ್ಲೇ ಇರುವ ಮನೆಯವರಿಗೆ ಏನಾದರೂ ತೊಂದರೆ ಆಗಿದ್ದರೆ ಯಾರು ಹೊಣೆ ಹೊರುತ್ತಿದ್ದರು? ತಕ್ಷಣವೇ ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ವಿದ್ಯುತ್ ಪರಿವರ್ತಕ ಸ್ಥಳಾಂತಕ್ಕೆ ಮುಂದಾಗಬೇಕಿದೆ.
ಬೇಬಿ ಪ್ರಕಾಶ್, ನಾರ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ನಮ್ಮ ಮನೆಯ ಕೆಲವೇ ಅಡಿಗಳ ಅಂತರದಲ್ಲಿ ವಿದ್ಯುತ್ ಪರಿವರ್ತಕ ಇದೆ. ಮಳೆಗಾಲದಲ್ಲಂತೂ ಹೇಳುವ ಆಗಿಲ್ಲ. ಆಗಿಂದಾಗ್ಗೆ ವಿದ್ಯುತ್ ಪ್ರವಹಿಸಿ ನೋವು ಅನುಭವಿಸಿದ್ದೇವೆ. ಈ ಬಗ್ಗೆ ಸಾಕಷ್ಟು ಬಾರಿ ವಿದ್ಯುತ್ ಪರಿವರ್ತಕ ಸ್ಥಳಾಂತರಿಸುವಂತೆ ಅರ್ಜಿ ಸಲ್ಲಿಸಿ ಸಾಕಾಗಿದ್ದೇವೆ. ಮಳೆಗಾಲದಲ್ಲಿ ಬೇರೆಯವರ ಮನೆಯಲ್ಲಿ ಮಲಗಿ ದಿನ ಕಳೆದಿದ್ದೇವೆ. ಈಗ ನೋಡಿದರೆ ಪರಿವರ್ತಕವೇ ಸುಟ್ಟು ಹೋಗಿದೆ. ಜನರು ಓಡಾಡುವ ಸಂದರ್ಭವಾಗಿದ್ದರೆ ದೇವರೇ ಗತಿ.
ಅಲೀಮಾ, ಮನೆ ಮಾಲಕಿ, ಬ್ಯಾದನೆ ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net