

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯ ಚಿಂಥನ ಮಂಥನದಲ್ಲಿ ಪರಿಶುದ್ಧಗೊಂಡು ಗುರುವಿನ ಮಾರ್ಗದರ್ಶನದಂತೆ ನಡೆದರೆ ಆತನ ದಾರಿ ದೀಪ ದೈವತ್ವದ ಬೆಳಕಿನಡೆ ಸಾಗುತ್ತದೆ ಎಂದು ಉಪನ್ಯಾಸಕಿ ಡಾ. ವೀಣಾ ಹೂಗಾರ ಹೇಳಿದರು.
ನಗರದ ಉಳವಿ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘವು ಸೋಮವಾರ ಏರ್ಪಡಿಸಿದ್ದ ಪದ್ಮಾವತಿ ಅಂಗಡಿ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜ್ಞಾನದ ಪ್ರಕಾಶ ದೊರೆತಾಗಲೇ ನಮ್ಮ ಅಜ್ಞಾನದ ಅಂಧಕಾರ ದೂರವಾಗಲು ಸಾಧ್ಯ. ಸುಜ್ಞಾನದ ಮಾರ್ಗದರ್ಶನ ಮಾಡಿದವರು ನಮಗೆ ಗುರುವಾಗುತ್ತಾರೆ. ಗುರು ಎಂದರೆ ಬರೀ ದೀಕ್ಷಾ ಗುರುವಲ್ಲ. ಅರಿವು ಮೂಡಿಸುವವರೇ ಗುರು ಎಂದರು.
ದತ್ತಿದಾನಿ ಡಾ. ಉಜ್ವಲಾ ಹಿರೇಮಠ ಮಾತನಾಡಿ, ಬಸವಣ್ಣ ಲೋಕ ಕಲ್ಯಾಣದ ಅರಿವಿನ ದೀವಿಗೆ ಹೊತ್ತಿಸಿದರೆ, ಚನ್ನಬಸವಣ್ಣನವರು ಅರಿವಿನ ದೀವಿಗೆ ನಂದದಂತೆ ಕಾಪಾಡಿದರು. ಬಸವಣ್ಣ ಜ್ಞಾನದ ಸಾಕ್ಷಾತ್ಕಾರದ ಮಾರ್ಗ ತಿಳಿಸಿದರೆ ಚನ್ನಬಸವಣ್ಣ ಜ್ಞಾನದ ಸಂಗ್ರಹವನ್ನು ಸಂರಕ್ಷಿಸಿ ಲೋಕಕ್ಕೆಲ್ಲ ತಲಪುವಂತೆ ಮಾಡಿದರು. ಬಸವಣ್ಣನವರಿಗೆ ಅಕ್ಕನಾಗಿ, ಚನ್ನಬಸವಣ್ಣನವರಿಗೆ ತಾಯಿಯಾಗಿ ದಾರಿ ಬೆಳಗಿದವಳು ಅಕ್ಕನಾಗಮ್ಮ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಅಳಿದು ಹೋಗಬಹುದಾಗಿದ್ದ ವಚನ ಸಾಹಿತ್ಯವನ್ನು ರಕ್ಷಿಸಿಟ್ಟು ಲೋಕಕ್ಕೆ ಪಸರಿಸುವ ಕಾರ್ಯ ಮಾಡಿದರು ಎಂದರು.
ಸಂಘದ ಅಧ್ಯಕ್ಷ ಡಾ. ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಪುಷ್ಪಾ ಹಾಲಭಾವಿ ವಚನಗೀತೆ ಪ್ರಸ್ತುತಪಡಿಸಿದರು. ಸುನಿತಾ ಮೂರಶಿಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಉಷಾ ಗದ್ದಗಿಮಠ ನಿರೂಪಿಸಿದರು.