ಸುಗ್ರಿವಾಜ್ಞೆ ಹಿಂಪಡೆಯಲು ಒತ್ತಾಯ

HN 21-2
Published on

ವಿಜಯಪುರ: ಸರ್ಕಾರ ಹೊರಡಿಸಿರುವ ಸುಗ್ರಿವಾಜ್ಞೆ ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ರೈತ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಕಾರ್ಪೋರೇಟ್ ಕಂಪನಿಗಳ ಗುಲಾಮಗಿರಿಯಲ್ಲಿ ಕೇಂದ್ರ ಸರ್ಕಾರಕ್ಕಿಂತ ತಾನು ಮುಂದೆ ಎನ್ನುವ ರೀತಿಯಲ್ಲಿ ರಾಜ್ಯ ಸರ್ಕಾರ ಮೂರು ತಿಂಗಳ ಹಿಂದೆ ಬಂಡವಾಳಗಾರರು ಸುಲಭವಾಗಿ ಕೃಷಿ ಭೂಮಿಯನ್ನು ಪಡೆಯಲು ‘ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಹಿಂದೆ ದೇವರಾಜ ಅರಸು ಅವರು ‘ಉಳುವವನೇ ಹೊಲದೊಡೆಯ’ ಯೋಜನೆ ಅನುಷ್ಠಾನಕ್ಕೆ ತಂದಿದ್ದರು. ಇದೀಗ ‘ಕಾಸು ಉಳ್ಳವನೇ ಹೊಲದೊಡೆಯ’ ಎನ್ನುವಂತೆ ಕರ್ನಾಟಕ ಭೂಸುಧಾರಣಾ ಕಾಯ್ದೆ-1961ಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ವರೆಗೆ ರೈತರು ಮಾತ್ರ ಕೃಷಿ ಭೂಮಿ ಖರೀದಿ ಮಾಡಬಹುದೆಂದು ಇದ್ದ ಕಾನೂನನ್ನು ರದ್ದು ಮಾಡಿ, ದುಡ್ಡು ಇರುವ ಯಾರೂ ಬೇಕಾದರೂ ಕೃಷಿ ಭೂಮಿ ಖರೀದಿಸಬಹುದೆಂದು, ಒಂದು ರೈತ ಕುಟುಂಬ ಗರಿಷ್ಠ 54 ಎಕರೆ ಮಾತ್ರ ಭೂಮಿ ಹೊಂದಬಹುದು ಎಂಬುದನ್ನು ಬದಲಿಸಿ ಐದು ಜನರಿಗಿಂತ ಹೆಚ್ಚಿರುವ ಕುಟುಂಬ 216 ಎಕರೆ ಭೂಮಿ ಹೊಂದಬಹುದೆಂದು ತಿದ್ದುಪಡಿ ತರಲು ಸರ್ಕಾರ ಹೊರಟಿದೆ. ಈ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈ ಬಿಡಬೇಕೆಂದು ಒತ್ತಾಯಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ, ಅಗತ್ಯ ಸಾಮಗ್ರಿ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ, ಬೀಜ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕು. ಬಡ ರೈತರ, ಕೃಷಿ ಕೂಲಿಕಾರರ ಒಡೆತನದಲ್ಲಿ ಇರುವ ಬಗರ್‌ಹುಕ್ಕುಂ ಸಾಗುವಳಿಯ ಭೂಮಿ ಸಕ್ರಮಗೊಳಿಸಬೇಕು. ಆರ್ಥಿಕವಾಗಿ ಹಿಂದುಳಿದ ಕಡುಬಡವರಿಗೆ ನಿವೇಶನ ಕಲ್ಪಿಸಬೇಕು. ಗ್ರಾಮೀಣ ಪ್ರದೇಶದ ಮನೆಗಳು ಅಕ್ರಮ ಸಕ್ರಮಗೂಳಿಸಿ ಹಕ್ಕು ಪತ್ರ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದ ದಿನಗಳನ್ನು ವರ್ಷದಲ್ಲಿ 200 ದಿನಕ್ಕೆ ಹೆಚ್ಚಿಸಿ ದಿನಗೂಲಿಯ ದರವನ್ನು 500 ರೂ.ಗೆ ಏರಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಬಿ. ಭಗವಾನ್‌ರೆಡ್ಡಿ, ಬಾಳು ಜೇವೂರ, ಅರವಿಂದ ಕುಲಕರ್ಣಿ, ಅಕ್ರಮ್ ಮಾಶ್ಯಾಳಕರ, ಪ್ರಕಾಶ ಹಿಟ್ನಳ್ಳಿ, ಸಿದ್ದಲಿಂಗ ಬಾಗೇವಾಡಿ, ಶ್ರೀನಾಥ ಪೂಜಾರ, ಸುರೇಖಾ ರಜಪೂತ, ಸುನೀಲ ಸಿದ್ರಾಮಶೆಟ್ಟಿ, ಸದಾಶಿವ ಬರಟಗಿ, ಯಲಗೂರದಪ್ಪ ಚಲವಾದಿ, ಭೀಮಶಿ ಕಟ್ಯಾಳ, ಸುಭಾಸ ತಳಕೇರಿ, ಯಮನಪ್ಪ ಪೂಜಾರಿ, ಬಾಬೂ ಬೀರಕಬ್ಬಿ, ಸುಮಿತ್ರಾ ಘೊಣಸಗಿ, ಮಹಾದೇವ ಲಿಗಾಡೆ, ದುಂಡೇಶ ಬಿರಾದಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net