ಸುಗ್ಗಿಕಲ್ಲು ರೈತರ ಧರ್ಮ ಸಾರುವ ಗೀತೆ

7 ckm 3
ಚಿಕ್ಕಮಗಳೂರಿನ ಕೋಟೆಯ ಹೇಮಚಂದ್ರ ಅವರ ಮನೆಯಂಗಳದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ಸುಗ್ಗಿ ಕಲ್ಲು, ಸುಗ್ಗಿ ಕಲ್ಲು ಕೋಟೆಯಲ್ಲಿದೆ ಗೀತೆಯನ್ನು ವಿದುಷಿ ಸುಮನಾ ರಾಮಚಂದ್ರ ಲೋಕಾರ್ಪಣೆಗೊಳಿಸಿದರು.
Published on

ಚಿಕ್ಕಮಗಳೂರು: ರೈತರ ಧರ್ಮವನ್ನು ಎತ್ತಿ ಹಿಡಿವ ಸುಗ್ಗಿಕಲ್ಲು ಎಂದರೆ ಅದು ರೈತರ ಬೆವರಿನ ಬಂಗಾರ ಎಂದು ಹೇಳಿರುವುದು ಅತ್ಯಂತ ಮಹತ್ವದ ಸಂಗತಿ. ಸುಗ್ಗಿಕಲ್ಲು ಗೀತೆ ನಿಜಕ್ಕೂ ಚಿಕ್ಕಮಗಳೂರು ಕೋಟೆಯ ಹೆಮ್ಮೆಯ ಸ್ಮಾರಕ. ಇದರ ರಕ್ಷಣೆ ನಮ್ಮೆಲ್ಲರ ಹೊಣೆ. ಗೀತೆಯ ಮೂಲಕ ಇದನ್ನು ನಾಡಿಗೆ ಪರಿಚಯಿಸುತ್ತಿರುವ ಕಲ್ಕಟ್ಟೆ ಪುಸ್ತಕದ ಮನೆ ನಿಜಕ್ಕೂ ಶ್ಲಾಘನೀಯ ಕಾರ್ಯ ಮಾಡಿದೆ ಎಂದು ಕೃಷಿಕ, ಸಾಹಿತಿ ಕ್ಯಾತನಬೀಡು ರವೀಶ್ ಬಸಪ್ಪ ತಿಳಿಸಿದರು.

ನಗರದ ಕಲ್ಕಟ್ಟೆ ಪುಸ್ತಕದ ಮನೆ, ಸೂರಂಕಣ, ದೀವಿಗೆ ಬಳಗದವರು ಕೋಟೆಯ ಹೇಮಚಂದ್ರ ಅವರ ಮನೆಯಂಗಳದಲ್ಲಿ ಏರ್ಪಡಿಸಿದ್ದ ಗಾಯಕಿ ವೈಷ್ಣವಿ ಎನ್.ರಾವ್ ಹಾಡಿದ `ಸುಗ್ಗಿ ಕಲ್ಲು, ಸುಗ್ಗಿ ಕಲ್ಲು ಕೋಟೆಯಲ್ಲಿದೆ ಗೀತೆಯ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರೈತರು ಸಮಾಜದಲ್ಲಿ ಮೇಲುಸ್ತರದ ಜೀವನ ನಡೆಸುವ ಕಾಲ ಮತ್ತೆ ಮರುಕಳಿಸಬೇಕು. ನೆಲದ ಹಸಿರನ್ನು ಕಾಪಾಡುವ ಪ್ರಜ್ಞೆ ರೈತರಲ್ಲಿದೆ. ಭೂಮಿ ಅನ್ನ ನೀಡದಿದ್ದರೆ ನಾವು ಏನನ್ನೂ ತಿನ್ನಲಾಗುವುದಿಲ್ಲ. ಆಧುನಿಕ ಕಾಲದಲ್ಲಿ ಎಷ್ಟೇ ತಂತ್ರಜ್ಞಾನ ಮುಂದುವರಿದರೂ ರೈತರ ಧರ್ಮವೇ ನಿಜವಾಗಿ ಮೌಲ್ಯಯುತವಾದುದು ಎಂದು ತಿಳಿಸಿದರು.

ಗೀತೆಯನ್ನು ಲೋಕಾರ್ಪಣೆಗೊಳಿಸಿದ ವಿದುಷಿ ಸುಮನಾ ರಾಮಚಂದ್ರ ಮಾತನಾಡಿ, ಒಂದು ಊರಿನ ಗೌರವ ಅಲ್ಲಿನ ರೈತ ಸಂಸ್ಕೃತಿ ಮತ್ತು ಲಲಿತ ಕಲಾ ಶ್ರೀಮಂತಿಕೆಯಿAದ ಹೆಚ್ಚಾಗುತ್ತದೆ. ಈ ದಿಸೆಯಲ್ಲಿ ಕಲ್ಕಟ್ಟೆ ಪುಸ್ತಕದ ಮನೆಯ ರೇಖಾ ನಾಗರಾಜರಾವ್ ನಗರದ ಎಲ್ಲ ದೇವಾಲಯಗಳ ಕುರಿತು ಭಕ್ತಿಗೀತೆ ನಿರ್ಮಿಸುತ್ತಿರುವುದರ ಜೊತೆಗೆ ಸ್ಮಾರಕ ಗೀತೆಗಳನ್ನೂ ನಿರ್ಮಿಸುತ್ತಿರುವುದು ಅಭಿನಂದನೀಯ ಕಾರ್ಯ. ಕೃಷಿ ಪ್ರಧಾನವಾದ ಭಾರತ ಜಗತ್ತಿನ ನೆಮ್ಮದಿಯ ದೇಶವಾಗಿದೆ ಎಂದರು.

ಹಿರಿಯ ಸಮಾಜ ಸೇವಕ ಕೋಟೆ ರಂಗನಾಥ್ ಅವರು ಸುಗ್ಗಿಕಲ್ಲಿನ ಇತಿಹಾಸ, ಕೋಟೆಯ ಹಿಂದಿನ ಜನಜೀವನ, ಕಬ್ಬು, ಭತ್ತ, ಜೋಳಗಳ ಸುಗ್ಗಿಯ ಕುರಿತು ಮಾತನಾಡಿದರು. ಹಿಂದೆ ಜಿಲ್ಲಾಡಳಿತ ಸುಗ್ಗಿಕಲ್ಲನ್ನು ಸ್ಥಳಾಂತರಿಸುವ ಚಿಂತನೆ ನಡೆಸಿದಾಗ ಅದರ ವಿರುದ್ಧ ಅಹೋರಾತ್ರಿ ಹೋರಾಡಿದ ಮಾಹಿತಿಯನ್ನು ಅಂಚೆಮನೆ ಸುಧಾಕರ್ ನೀಡಿದರು.

ಗೀತೆಗೆ ಸಾಹಿತ್ಯ ನೀಡಿ ಸಹಗಾಯನ ನೀಡಿದ ನಾಗರಾಜರಾವ್ ಕಲ್ಕಟ್ಟೆ, ಶಾಸಕರ ಆಪ್ತ ಕಾರ್ಯದರ್ಶಿ ಹಯವದನರಾವ್, ನಾಟಿ ವೈದ್ಯೆ ಶಾಂತಮಲ್ಲೇಶರಾವ್, ಕೀಬೋರ್ಡ್ ವಾದಕ ಕೆ.ಎನ್.ನಾಗಭೂಷಣ್, ದಾಸಪ್ಪಶೆಟ್ಟಿ. ಭಾರತಿ ಹೇಮಚಂದ್ರ, ನರಸಿಂಹನಾಯಕ್, ಅಶ್ವಿತ, ಕೃಪಾಶ್ರೀ ಕಳಸಾಪುರ, ಸುನಿಲ್ ಅಂಬಳೆ, ರೊನಾಲ್ಡ್, ಜಯಂತ್ ಆಚಾರ್ ಮೊದಲಾದವರು ಉಪಸ್ಥಿತರಿದ್ದರು. ನಾಗರಾಜರಾವ್ ಕಲ್ಕಟ್ಟೆ ಸ್ವಾಗತಿಸಿ, ನಿರೂಪಿಸಿದರು. ರಾಕೇಶ್ ಹಿರೇಮಗಳೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net