ಸುಗಮ ಸಂಚಾರಕ್ಕೆ ಕ್ರಮ

9 GAJENDRA GAD 2
Published on

ಗಜೇಂದ್ರಗಡ: ಪಟ್ಟಣದ ಕೆಲವೆಡೆ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ಕುರಿತು ದೂರುಗಳು ಬರುತ್ತಿವೆ. ಸ್ಥಗಿತವಾಗಿದ್ದ ಟ್ರಾಫಿಕ್ ಸಿಗ್ನಲ್ ಪುನರಾರಂಭಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪಿಎಸ್​ಐ ಗುರುಶಾಂತ ದಾಶ್ಯಾಳ ಹೇಳಿದರು.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್, ಫುಟ್​ಪಾತ್ ಅತಿಕ್ರಮಣವನ್ನು ಮಂಗಳವಾರ ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪಟ್ಟಣದಲ್ಲಿ ದಿನೇ ದಿನೆ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಪ್ರಮುಖ ವೃತ್ತ, ಕೆಲವು ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಪುರಸಭೆ, ಶಾಸಕರಿಗೆ ತಿಳಿಸಲಾಗಿತ್ತು. ಶಾಸಕ ಕಳಕಪ್ಪ ಬಂಡಿ ಅವರ ಮುತುವರ್ಜಿಯಿಂದ ಮಂಜೂರಾದ ಸಂಸದರ ಅನುದಾನದ 20 ಲಕ್ಷ ರೂ. ಗಳಲ್ಲಿ ಸಿಸಿ ಕ್ಯಾಮರಾಗಳನ್ನು ಶೀಘ್ರದಲ್ಲಿ ಅಳವಡಿಸಲಾಗುವುದು ಎಂದರು.

ಪಟ್ಟಣಕ್ಕೆ ನಿತ್ಯ ನೆರೆ ತಾಲೂಕು, 30ಕ್ಕೂ ಅಧಿಕ ಗ್ರಾಮಗಳಿಂದ ಜನರು ವ್ಯಾಪಾರ-ವಹಿವಾಟಿಗೆ ಆಗಮಿಸುತ್ತಾರೆ. ಅದರಿಂದಾಗಿ ಪಟ್ಟಣದಲ್ಲಿ ವಾಹನ ಸಂಚಾರ, ಜನದಟ್ಟಣೆ ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಇಲ್ಲಿನ ಕೆಕೆ ವೃತ್ತದಲ್ಲಿ ಸಂಚಾರಿ ನಿಯಮ ಪಾಲಿಸಲು ಜೀಬ್ರಾ ಕ್ರಾಸ್ ಗುರುತು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಕೆಲವು ವ್ಯಾಪಾರಸ್ಥರು ಆಕ್ರಮಿಸಿಕೊಂಡ ಫುಟ್​ಪಾತ್ ತೆರವು ಮಾಡಿ ಪಾದಚಾರಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net