ಸುಂದರ ಬದುಕಿಗೆ ಓದುವ ಸಂಸ್ಕೃತಿ ಬೆಳೆಯಲಿ

mysore
Published on

ಮೈಸೂರು: ಬದುಕು ಸುಂದರವಾಗಬೇಕಾದರೆ ಓದುವ ಸಂಸ್ಕೃತಿ ಬೆಳೆಸಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.

ಜಾನಪದ ಸಾಹಿತ್ಯ ಪರಿಷತ್, ಎಸ್‌ಎಂಜಿ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಇಲವಾಲ ಅಲೋಕ ರಸ್ತೆಯ ಎಸ್‌ಎಂಜಿ ಬಡಾವಣೆಯ ಡಾ.ನಂಜುಂಡಸ್ವಾಮಿ ಹರದನಹಳ್ಳಿ ಅವರ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಮನೆಮನೆ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ಹಸ್ತ’ಕ್ಕೆ ಮೊಬೈಲ್ ಬಂದ ನಂತರ ‘ಪುಸ್ತಕ’ ಓದುವ ಸಂಸ್ಕೃತಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತದೆ. ಆದರೆ ಜ್ಞಾನ ಎಂಬುದು ಪುಸ್ತಕದಿಂದ ಮಸ್ತಕಕ್ಕೆ ಹೋಗುತ್ತದೆಯೇ ಹೊರತು ಮೊಬೈಲ್‌ನಿಂದ ಅಲ್ಲ. ಆದ್ದರಿಂದ ಬದುಕು ಸುಂದರವಾಗಬೇಕಾದರೆ ಓದುವ ಸಂಸ್ಕೃತಿ ಬೆಳೆಸಬೇಕು ಎಂದು ತಿಳಿಸಿದರು.

ಈಗ ಕವಿಗಳು ಹೆಚ್ಚಾಗಿದ್ದಾರೆ. ಕವಿತೆ ಓದುವವರು ಕಡಿಮೆಯಾಗಿದ್ದಾರೆ ಎಂದು ಕುಚೋದ್ಯ ಮಾಡಲಾಗುತ್ತದೆ. ಕಳ್ಳಕಾಕರು ಹೆಚ್ಚಾದರೆ ಆತಂಕಪಡಬೇಕು. ಕವಿಗಳು ಹೆಚ್ಚಾದರೆ ತಪ್ಪೇನು? ಇದಕ್ಕೆ ಸಂತೋಷಪಡಬೇಕು ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ಸಾಹಿತ್ಯದಲ್ಲಿ ಬದುಕು ಕಟ್ಟುವ ಗುಣ ಇದೆ. ಮನಸ್ಸಿಗೆ ಸಾಹಿತ್ಯದ ‘ಹಂಬಲ’ ಇದ್ದರೆ ದೇಹದ ‘ಬೆಂಬಲ’ ಸಿಗುತ್ತದೆ. ಬದುಕಿನ ಜಂಜಾಟದಿಂದ ಹೊರಬರಲು ಸಾಹಿತ್ಯ, ಕಲೆ ನೆರವಾಗುತ್ತವೆ ಎಂದರು.

ಈಗ ‘ಕವಿಮನೆ’ಯಲ್ಲಿ ಕವಿಗೋಷ್ಠಿಯಾಗಿದೆ. ಮುಂದೆ ‘ಕಿವಿ ಮನೆ’ಯಲ್ಲಿ ಕವಿಗೋಷ್ಠಿ ಆಗಬೇಕು. ಅರ್ಥಾತ್ ‘ಕೇಳುವ ಕಿವಿ’ಗಳಿರುವ ಮನೆಗಳಲ್ಲೂ ಕೂಡ ಕವಿಗೋಷ್ಠಿ ನಡೆಯಬೇಕು. ಅದೇ ರೀತಿ ‘ಮನೆ ಮನೆಗೆ ಕವಿಗೋಷ್ಠಿ’ಯ ಜತೆಗೆ ’ಮನ ಮನೆಗೂ ಕವಿಗೋಷ್ಠಿ’ ನಡೆಯಬೇಕು ಎಂದು ಅವರು ಆಶಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರವು ಪುಸ್ತಕ ಸಂಸ್ಕೃತಿ ಹೆಚ್ಚಿಸಲು ಮನೆಗೊಂದು ಗ್ರಂಥಾಲಯ, ಅಂಗಳಕ್ಕೊಂದು ತಿಂಗಳ ಪುಸ್ತಕ ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದರು.

ಡಾ.ನಂಜುಂಡಸ್ವಾಮಿ ಅವರ ‘ಸ್ವಾಮಿ ವಿವೇಕಾನಂದ’ ಕೃತಿಯನ್ನು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡಿದರು. ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಮಹೇಶ್ ಚಿಕ್ಕಲ್ಲೂರು, ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ರಾಜ್ಯ ನಿರ್ದೇಶಕಿ ಡಾ. ಪ್ರೇಮಾ ಪಿ.ವೈ.ಕೆ. ಮೋಳೆ, ಶ್ರೀಗಂಧ ಲಯನ್ಸ್ ಕ್ಲಬ್ ಅಧ್ಯಕ್ಷ ನಿಂಗರಾಜು ಎನ್ .ಬೆಳತ್ತೂರು, ಕವಯಿತ್ರಿ ಸುಚಿತ್ರಾ ಹೆಗಡೆ, ಸಿದ್ದರಾಮೇಗೌಡ ಇದ್ದರು.

ಕವಿಗೋಷ್ಠಿಯಲ್ಲಿ ಬಸಪ್ಪ ಸಿ. ಸಾಲುಂಡಿ, ನಾಗರಾಜ್ ಕುಮಾರ್, ಪುಷ್ಪಾ, ಪದ್ಮಾ, ಪದ್ಮಾಕ್ಷಿ, ಎಂ.ಆರ್. ಕುಮುದಾ, ಯಶೋದಾ, ಭಾಗ್ಯ ಗೌರೀಶ್. ಡಾ.ನಂಜುಂಡಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net