ಸುಂಟಿಕೊಪ್ಪದಲ್ಲಿ ಪೊಲೀಸರಿಂದ ಪಥಸಂಚಲನ

03sunti03
Published on

ಸುಂಟಿಕೊಪ್ಪ: ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡು ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ ಜಂಟಿಯಾಗಿ ಸುಂಟಿಕೊಪ್ಪದಲ್ಲಿ ಪಥಸಂಚಲನ ನಡೆಸಿದವು.


ಸೋಮವಾರ ಸಂಜೆ ಗದ್ದೆಹಳ್ಳದ ಬಳಿ ಅನೇಕ ವಾಹನಗಳಲ್ಲಿ ನೂರಾರು ಮಂದಿ ಸಮವಸ್ತ್ರ ಧರಿಸಿದ ಪೊಲೀಸ್ ಸಿಬ್ಬಂದಿ ಬಂದಿಳಿದರು. ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರರಾಜ್, ಕುಶಾಲನಗರ ವಿಭಾಗದ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ವೃತ್ತನಿರೀಕ್ಷಕ ಬಿ.ಜಿ.ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಡಿ.ಎಸ್.ಪುನೀತ್ ಅವರೊಂದಿಗೆ ಸಿಐಎಫ್‌ನ ಅಧಿಕಾರಿ ಚೌಹಾಣ್ 100ಕ್ಕೂ ಹೆಚ್ಚು ಮಂದಿ ತುಕಡಿ ಪಥಸಂಚಲನ ನಡೆಸಿದರು. ಸುಂಟಿಕೊಪ್ಪದ ಮುಖ್ಯರಸ್ತೆಯಲ್ಲಿ ಸಾಗಿದ ಪಥಸಂಚಲನ 1ನೇ ವಿಭಾಗದ ಗುಡ್ಡಪ್ಪ ರೈ ಬಡಾವಣೆ, ಪಂಪ್‌ಹೌಸ್, ಮಧುರಮ್ಮ ಬಡಾವಣೆ ಮೂಲಕ ಮರಳಿ ಸುಂಟಿಕೊಪ್ಪದ ಪೊಲೀಸ್ ಠಾಣೆ ಬಳಿ ಮುಕ್ತಾಯಗೊಂಡಿತು.


ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್‌ರಾಜ್, ಕೊಡಗಿನ ಜನತೆ ಶಾಂತಿಪ್ರಿಯರು ಮಾತ್ರವಲ್ಲದೆ, ಚುನಾವಣಾ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವವರಾಗಿದ್ದಾರೆ. ಆದರೂ ಸಮಾಜದಲ್ಲಿ ಕೆಲ ಕೀಡಿಗೇಡಿಗಳು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರು ಇರುತ್ತಾರೆ. ಇಂತಹವರಿಗೆ ಎಚ್ಚರಿಕೆ ಹಾಗೂ ಶಾಂತಿಪ್ರಿಯ ಜನರಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಪಥಸಂಚಲನ ನಡೆಸಲಾಗಿದೆ ಎಂದರು.


ರಸ್ತೆ ಇಕ್ಕೆಲ್ಲಗಳಲ್ಲಿ ನಿಂತು ಜನರು ಪಥಸಂಚಲನ ವೀಕ್ಷಿಸಿದರು. ಕೆಲವರು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net