

ಸುಂಟಿಕೊಪ್ಪ: ಸಂತ ಆಂತೋಣಿ ಚೆರ್ಚ್ ಹಾಗೂ ವಿವಿಧ ಸಂಘ-ಸಂಸ್ಥೆ ಸಹಯೋಗದಲ್ಲಿ ಸಂತ ಮೇರಿ ಶಾಲಾವರಣದಲ್ಲಿ ಯೇಸುಕ್ರಿಸ್ತರ ಪುನರುತ್ಥಾನದ ಪಾಸ್ಕಕಾಲ(ಈಸ್ಟರ್) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಶನಿವಾರ ಮಧ್ಯರಾತ್ರಿ 10 ಗಂಟೆಗೆ ಸಂತ ಮೇರಿ ಶಾಲಾವರಣದಲ್ಲಿ ಮೈಸೂರು ಧರ್ಮಕೇತ್ರದ ಕೋಶಾಧಿಕಾರಿ ರೇ. ಫಾ. ಜೇಮ್ಸ್ ಡೊಮಿನಿಕ್, ಸಂತ ದೇವಾಲಯದ ಧರ್ಮಗುರು ಫಾದರ್ ಅರುಳ್ ಸೇಲ್ವಕುಮಾರ್ ಆಶೀರ್ವಚನ ನೀಡಿ, ಜೇನುಮೇಣದಿಂದ ತಯಾರಿಸಲಾದ ದೊಡ್ಡ ಮೊಂಬತ್ತಿ ಬೆಳಗಿಸಿದರು. ನಂತರ ಮೊಂಬತ್ತಿಯನ್ನು ಶಾಲಾವರಣದಿಂದ ಮೆರವಣಿಗೆ ಮೂಲಕ ತಂದು ಚರ್ಚ್‌ನ ಪೀಠದಲ್ಲಿ ಪ್ರತಿಷ್ಠಾಪಿಸಿ ಹಬ್ಬ ಆಚರಣೆಗೆ ಚಾಲನೆ ನೀಡಲಾಯಿತು.
ನಂತರ ನಡೆದ ಪ್ರಾರ್ಥನಾ ಕೂಟ ಹಾಗೂ ಆಡಂಬರ ದಿವ್ಯ ಬಲಿಪೂಜೆ ಜರುಗಿತು. ಯೇಸು ಕ್ರಿಸ್ತರು ಶಿಲುಬೆ ಏರಿ ಮರಣವನ್ನಾಪ್ಪಿದ್ದು, 3ನೇ ದಿನ ಸಮಾಧಿಯಿಂದ ಪುನರುತ್ಥಾನಗೊಂಡಿರುವುದನ್ನು ಕ್ರೈಸ್ತರು ಪಾಸ್ಕ ಕಾಲ(ಈಸ್ಟರ್) ಹಬ್ಬ ಎಂದು ಆಚರಿಸುವುದು ವಾಡಿಕೆ. ಅದರಂತೆ ಪುನರುತ್ಥಾನಗೊಂಡ ಯೇಸುವಿನ ಪ್ರತಿಮೆ ಪ್ರತಿಷ್ಠಾಪನೆ ಮಾಡಿ ಪ್ರಾರ್ಥಿಸಲಾಯಿತು.
ಉಪಯಾಜಕರಾದ ಚಾರ್ಲ್ಸ್ ಸಂತ ಕ್ಲಾರ ಕಾನ್ವೆಂಟಿನ ಸಿಸ್ಟರ್‌ಗಳು ಗಾಯನದೊಂದಿಗೆ ನೂರಾರು ಭಕ್ತಾದಿ ಪ್ರಾರ್ಥಾನೆ ಸಲ್ಲಿಸಿ, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.