ಸೀಲ್‌ಡೌನ್ ಪರಿಮಿತಿ ಸಡಿಲ

24cmy7
Published on

ಚಿಂತಾಮಣಿ: ಒಂದೇ ಕುಟುಂಬದ ಐವರಲ್ಲಿ ಸೋಂಕು ಕಾಣಿಸಿಕೊಂಡ ನಗರದ 9ನೇ ವಾರ್ಡ್‌ನಲ್ಲಿ ಸೀಲ್‌ಡೌನ್‌ನ ಪರಿಮಿತಿಯ ಹಂತಗಳನ್ನು ಸಡಿಲಗೊಳಿಸಲಾಗಿದ್ದು ಸೀಮಿತ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.

ನಗರದ ಚಿನ್ನಾಭರಣ ವ್ಯಾಪಾರಿಯಾದ ವೃದ್ಧನಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿತ್ತು, ನಂತರ ಆತನ ಮಗ, ಮೊಮ್ಮಗ, ಬಳಿಯ ಮಗಳು, ಅಳಿಯನಲ್ಲಿ ಸೋಂಕು ದೃಢಪಟ್ಟಿತ್ತು. ಆನಾರೋಗ್ಯದಿಂದ ಮೃತಪಟ್ಟ ಸೋಂಕಿತ ವೃದ್ಧನ ಪತ್ನಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದವರನ್ನು ಕ್ವಾರಂಟೈನ್‌ನಲ್ಲಿರಿಸಿ, ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು, ಬಹುತೇಕ ಎಲ್ಲರ ವರದಿಯೂ ನೆಗೆಟಿವ್ ಬಂದಿದೆ.

ಪ್ರಥಮ ಹಂತದ ಸಂಪರ್ಕಿಗಳು ಹಾಗೂ ದ್ವಿತೀಯ ಹಂತದ ಸಂಪರ್ಕಿಗಳ ಗಂಟಲು ದ್ರವ ಎರಡೆರಡು ಬಾರಿ ಪರೀಕ್ಷೆ ಮಾಡಲಾಗಿದೆ, ಅವರೆಲ್ಲರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ, ಜನತೆಗೆ ತೊಂದರೆಯಾಗದಂತೆ ತಡೆಯಲು ಜಿಲ್ಲಾ ಆಡಳಿತದ ಅದೇಶದಂತೆ ಸೀಲ್‌ಡೌನ್ ಅನ್ನು ಸೋಂಕು ಪ್ರದೇಶದ ವ್ಯಾಪ್ತಿಗೆ ಸೀಮಿತಗೊಳಿಸಲಾಗಿದೆ ಎಂದು ತಹಸೀಲ್ದಾರ್ ಡಿ.ಹನುಮಂತರಾಯಪ್ಪ ತಿಳಿಸಿದ್ದಾರೆ.

ಮೇ 9 ರಿಂದ ವಾರ್ಡ್‌ನ ಪೂರ್ವಕ್ಕೆ ಪಾಂಡುರಂಗಸ್ವಾಮಿ ದೇವಾಲಯ, ಪಶ್ವಿಮಕ್ಕೆ ಬೆಂಗಳೂರು ಜೋಡಿ ರಸ್ತೆ, ಉತ್ತರಕ್ಕೆ ಮುನಿಸಿಪಲ್ ಹಿಂಭಾಗದ ರಸ್ತೆ ಮತ್ತು ದಕ್ಷಿಣಕ್ಕೆ ಮಾಳಪಲ್ಲಿ ರಸ್ತೆಯ ಸುತ್ತಳತೆಯನ್ನು ಸೀಲ್‌ಡೌನ್ ಮಾಡಲಾಗಿತ್ತು, ವ್ಯಾಪ್ತಿಯನ್ನು ಮಿತಿಗೊಳಿಸಿದ ಹಿನ್ನೆಲೆಯಲ್ಲಿ ಭಾನುವಾರ ಸೋಂಕಿತರ ಮನೆಯ 100 ಮೀಟರ್ ಸುತ್ತಳತೆಯ ಪರಿಮಿತಿಯಲ್ಲಿ ಮಾತ್ರ ಸಂಪೂರ್ಣ ಸೀಲ್ ಡೌನ್ ಮಾಡಿಲಾಗಿದೆ, ಮುಂಜಾಗ್ರತೆ ದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net