

ಹುಬ್ಬಳ್ಳಿ: ಇಲ್ಲಿನ ನವ ಆಯೋಧ್ಯಾನಗರದಲ್ಲಿ ಕರೊನಾ ಸೋಂಕಿತ ವ್ಯಕ್ತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ 100 ಮೀಟರ್ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಮಹಾನಗರ ಪಾಲಿಕೆ ಸಿಬ್ಬಂದಿ ಸೀಲ್ಡೌನ್ ಪ್ರದೇಶದ ಮೇಲೆ ಕಟ್ಟೆಚ್ಚರ ವಹಿಸಿದ್ದಾರೆ.
ಸೀಲ್ಡೌನ್ ಪ್ರದೇಶದಲ್ಲಿ ಜನರು ಓಡಾಡದಂತೆ ನಿಗಾ ಇಡಲಾಗಿದೆ. ಜನರು ಹಾಗೂ ವಾಹನ ಓಡಾಟ ತಡೆಯಲು ಪ್ರದೇಶದ ಕೊನೆಯಲ್ಲಿ ಬಿದಿರನ್ನು ಬಳಸಿ ದಾರಿ ಬಂದ್ ಮಾಡಲಾಗಿದೆ. ಸ್ಯಾನಿಟೈಜೇಷನ್ ಮಾಡುವ ಪೌರ ಕಾರ್ವಿುಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.
ಮನೆಯ ಮುಂದೆ ಕಸ ಸಂಗ್ರಹಿಸದಂತೆ ತಿಳಿ ಹೇಳಲಾಗುತ್ತಿದೆ. ಆದರೂ ಜನರು ಕಸ ಹೊರಗಡೆ ಹಾಕುವುದನ್ನು ಬಿಡುತ್ತಿಲ್ಲ. ಮನೆಯಿಂದ ಹೊರಬರದಂತೆ ಸೂಚಿಸಿದ್ದರೂ ಕೆಲವರು ಅನಗತ್ಯ ಓಡಾಟದಲ್ಲಿ ತೊಡಗಿದ್ದಾರೆ. ಸೋಂಕು ಹರಡದಂತೆ ಎಚ್ಚೆತ್ತುಕೊಳ್ಳಲು ಆರೋಗ್ಯ ಇಲಾಖೆ ಸಿಬ್ಬಂದಿ ಸಲಹೆ ನೀಡುತ್ತಿದ್ದಾರೆ. ಮನೆ ಬಾಗಿಲಿಗೇ ತರಕಾರಿ, ದಿನಸಿ ಬರಲಿದ್ದು, ಮನೆಯಿಂದ ಒಬ್ಬರೇ ಹೊರಗಡೆ ಬಂದು ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತಿದೆ.
ಸಂಚಾರ ದಟ್ಟಣೆ: ಬಸ್ ಸಂಚಾರ ಆರಂಭವಾಗಿರುವುದರಿಂದ ಚನ್ನಮ್ಮ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಾಹನ ಹಾಗೂ ಜನದಟ್ಟಣೆ ಹೆಚ್ಚಿದೆ. ಇಷ್ಟು ದಿನ ಮನೆಯಿಂದ ಯಾರೂ ಹೊರಗಡೆ ಬಾರದಂತೆ ಎಚ್ಚರಿಸುತ್ತಿದ್ದ ಪೊಲೀಸರು ಈಗ ಸಂಚಾರ ನಿಯಮ ಉಲ್ಲಂಘಿಸಬೇಡಿ ಎಂದು ತಿಳಿಹೇಳುತ್ತಿದ್ದಾರೆ.
EndFragment