

ಚಿಕ್ಕಮಗಳೂರು: ಒಬ್ಬ ವ್ಯಕ್ತಿ ಅತ್ಯಂತ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿ ಜನರ ಮನಸ್ಸಿನಲ್ಲಿ ಸ್ಥಿರಸ್ಥಾಯಿಯಾಗಿ ಉಳಿಯುತ್ತಾರೆ ಎಂಬುದಕ್ಕೆ ಇಂದಿನ ದಿನಮಾನದ ಉದಾಹರಣೆ ಎಂದರೆ ಅದು ಪುನೀತ್ ರಾಜ್‌ಕುಮಾರ್. ಅವರನ್ನು ಕಂಡರೆ ಹಿರಿಯರು-ಕಿರಿಯರು ಪ್ರೀತಿ ವಿಶ್ವಾಸ ತೋರುತ್ತಿದ್ದರು. ಪ್ರೀತಿಗೆ ಯಾವುದೇ ಸೀಮೆ, ಭಾಷೆಯ ಗಡಿ ಇರುವುದಿಲ್ಲ. ಇಂಥ ಪ್ರೀತಿಯನ್ನು ಹುಟ್ಟುಹಾಕಿರುವುದು ಪುನೀತ್ ರಾಜ್‌ಕುಮಾರ್ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದಿAದ ಆಯೋಜಿಸಲಾಗಿದ್ದ ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಅವರದ್ದು ಆಕರ್ಷಕ ವ್ಯಕ್ತಿತ್ವ. ಅವರ ನಗು ಅಪರಿಚಿತರನ್ನೂ ಆಕರ್ಷಿಸುವ ಶಕ್ತಿ ಹೊಂದಿತ್ತು. ತಮ್ಮ ಕೊನೆ ಕಾಲದವರೆಗೆ ಮುಗ್ಧತೆ ಕಾಪಾಡಿಕೊಂಡು ಬಂದವರು ಪುನೀತ್ ರಾಜ್‌ಕುಮಾರ್ ಎಂದು ಬಣ್ಣಿಸಿದರು.
ಪುನೀತ್ ರಾಜ್‌ಕುಮಾರ್ ಅವರಿಗೆ ದೈವದತ್ತವಾಗಿಯೇ ಕಲೆ ಬಂದಿತ್ತು. ಹೀಗಾಗಿಯೇ ಬಾಲ ನಟನಾಗಿಯೇ ಪುನೀತ್ ರಾಷ್ಟç ಪ್ರಶಸ್ತಿ ಪಡೆದಿದ್ದರು. ಆದರೆ ಅವರ ಸಾವು ಅನಿರೀಕ್ಷಿತ. ಅವರ ಕೊನೆದಿನಕ್ಕೂ ನಾಲ್ಕು ದಿನ ಮೊದಲು ಅವರ ಅಕಾಡೆಮಿಯ ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದರು. ಅದಾಗಿ ಕೆಲದಿನದಲ್ಲೇ ಅವರಿಲ್ಲ ಎಂಬುದನ್ನು ಕೇಳಿ ಒಂದು ಕ್ಷಣ ದಂಗಾಗಿ ಹೋಗಿದ್ದೆ. ಶಾರೀರಿಕವಾಗಿ ಪುನೀತ್ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಮಾನಸಿಕವಾಗಿ ಇಂದೂ ಎಂದೆAದಿಗೂ ಅವರು ನಮ್ಮೊಂದಿಗಿದ್ದಾರೆ ಎಂದರು.
ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಾ.ರಾ.ಗೋವಿಂದ್ ಮಾತನಾಡಿ, ಪುನೀತ್ ರಾಜ್ ಕುಮಾರ್ ಮಾಡಿರುವ ಸಮಾಜಮುಖಿ ಕೆಲಸಗಳು ಇಂದು ಎಲ್ಲರ ಮುಂದಿವೆ. ಇದೇ ಕಾರಣದಿಂದಲೇ ಅವರು ರಾಜ್ಯದ ಜನರಿಗೆ ಅಚ್ಚುಮೆಚ್ಚಿನವಾಗಿದ್ದರು ಎಂದರು.
ಡಾ. ರಾಜ್‌ಕುಮಾರ್ ಅವರು ಇಡೀ ಕರ್ನಾಟಕವನ್ನು ಸುತ್ತಿ ಗೋಕಾಕ್ ಚಳವಳಿಯ ನೇತೃತ್ವ ವಹಿಸಿದ್ದರಿಂದಲೇ ಕನ್ನಡಕ್ಕೆ ಗೆಲುವು ಸಿಕ್ಕಿತ್ತು. ಇದೇ ಕಾರಣದಿಂದಲೇ ಎಲ್ಲ ಪಕ್ಷಗಳೂ ರಾಜ್ ಕುಮಾರ್ ಅವರನ್ನು ಪ್ರೀತಿಯಿಂದಲೇ ಕಾಣುತ್ತಿದ್ದುದು ಮಾತ್ರವಲ್ಲದೆ ಅವರ ಮಾತಿಗೆ ಮೊದಲು ಮನ್ನಣೆ ನೀಡುತ್ತಿದ್ದರು ಎಂದು ಹೇಳಿದರು.
ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣಗೊಳಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ ಪ್ರೀತಿ ವರ್ಣಿಸಲು ಅಸಾಧ್ಯವಾಗಿದೆ. ತಮ್ಮ ಹುಟ್ಟೂರು ಚಿಕ್ಕಮಗಳೂರಿನಲ್ಲಿ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ಅನಾವರಣ ಮಾಡಿರುವುದು ಖುಷಿ ನೀಡಿದೆ ಎಂದರು.
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ೨೦೦೩ರಲ್ಲಿ ಡಾ.ರಾಜ್ ಕುಮಾರ್ ಅವರಿಗೆ ೭೫ ವರ್ಷ ತುಂಬಿದ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತಕ್ಕೆ ಬಂದು ಕನ್ನಡ ಧ್ವಜಸ್ತಂಭ ಉದ್ಘಾಟನೆ ನೆರವೇರಿಸಿದ್ದರು. ಪುನೀತ್ ರಾಜ್ ಕುಮಾರ್ ಅವರು ತಂದೆಯಷ್ಟೇ ಹೆಸರು ಮಾಡಿದ್ದರು. ತಂದೆಯAತೆಯೇ ಸರಳ ಜೀವನ ನಡೆಸಿದ್ದಾರೆ. ಬಾಲನಟನಿಂದ ಹಿಡಿದು ಕನ್ನಡದ ಶ್ರೇಷ್ಠ ನಟರಾಗಿದ್ದರು. ಇನ್ನಷ್ಟು ಸಾಧನೆ ಮಾಡುವ ಮುನ್ನವೇ ಅವರು ನಮ್ಮನ್ನು ಅಗಲಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.
ಪುನೀತ್ ರಾಜ್‌ಕುಮಾರ್ ಅವರಿಗೆ ನುಡಿನಮನ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಕರ್ನಾಟಕ ಮೇರು ನಟರಾಗಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಜಗದಗಲಕ್ಕೆ ವಿಸ್ತರಿಸಿದವರು ಡಾ.ರಾಜ್ ಕುಮಾರ್. ಅವರ ವಾರಸುದಾರಿಕೆ ಮುಂದುವರಿಸಿದವರು ಪುನೀತ್ ರಾಜ್‌ಕುಮಾರ್. ಆದರೆ ಇಂದು ಇಬ್ಬರೂ ನಮ್ಮ ನಡುವೆ ಇಲ್ಲ. ಆದರೆ ಅವರು ಕಲಾವಿದರಾಗಿ ನಟಿಸಿರುವ ಪಾತ್ರಗಳು ಇಂದು ನಮ್ಮ ನಡುವೆ ಇನ್ನೂ ಜೀವಂತವಾಗಿವೆ. ಇದಲ್ಲದೆ ಬಡಜನರಿಗೆ ದಾನಶೂರನಾಗಿ ಬದುಕಿದ ಪುನೀತ್ ರಾಜ್ ಕುಮಾರ್ ನೂರಾರು ವರ್ಷಗಳ ಕಾಲ ಜನರ ಮನಸ್ಸಿನಲ್ಲಿ ಇರುತ್ತಾರೆ ಎಂದರು.
ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಐ.ಕೆ.ಓಂಕಾರೆಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ತಮ್ಮಯ್ಯ, ಶಾಸಕ ಹುಳ್ಳಳ್ಳಿ ಸುರೇಶ್, ಪ್ರಮುಖರಾದ ಶ್ರೀನಿವಾಸ್, ಮುನಿಯಪ್ಪ, ಗೋಪಾಲಕೃಷ್ಣ, ಡಾ.ಜೆ.ಪಿ.ಕೃಷ್ಣೇಗೌಡ, ಅಪ್ಸರ್ ಅಹಮದ್ ಹಿಂದೂಸ್ತಾನಿ, ಉಮಾ ಐ.ಬಿ.ಶಂಕರ್, ಶೀಲಾ ದಿನೇಶ್, ಎಂ.ಎಲ್.ಮೂರ್ತಿ ಮತ್ತಿತರರಿದ್ದರು.