ಸೀಬಾರ ಬಳಿ ಸರಣಿ ಅಪಘಾತದಲ್ಲಿ ಮೂವರ ಸಾವು

CTD ---3
Published on

ಚಿತ್ರದುರ್ಗ: ತಾಲೂಕಿನ ಸೀಬಾರದ ಚನ್ನಯ್ಯಹಟ್ಟಿ ರಾಷ್ಟ್ರೀಯ ಹೆದ್ದಾರಿ 48 ರ ಮೇಲು ಸೇತುವೆಯಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತರನ್ನು ಲಾರಿ ಚಾಲಕ ಆಂಧ್ರದ ಅನಂತಪುರ ಜಿಲ್ಲೆ ತಾಡಪತ್ರಿಯ ಚಂದ್ರಶೇಖರ್‌ರೆಡ್ಡಿ (55), ಮತ್ತೊಬ್ಬ ಲಾರಿ ಚಾಲಕ ತಮಿಳುನಾಡು ಧರ್ಮಪುರಿ ಜಿಲ್ಲೆ ಮುತ್ತನೂರು ಗ್ರಾಮದ ಪೆರಿಯಾಸ್ವಾಮಿ(27)ಹಾಗೂ ಕಂಟೈನರ್ ಕ್ಲೀನರ್ ಉತ್ತರ ಪ್ರದೇಶದ ಅಲಿಘರ್‌ಜಿಲ್ಲೆ ಷೇಕ್‌ಸರಾಯಿ ಗ್ರಾಮದ ಮಹಮದ್ ಕೈಫ್(22)ಎಂದು ಗುರುತಿಸಲಾಗಿದೆ.

ಬೆಂಗಳೂರು- ದಾವಣಗೆರೆ ಮಾರ್ಗದಲ್ಲಿ ಭತ್ತ ತುಂಬಿದ್ದ ಲಾರಿ ಸೇತುವೆ ಮೇಲೆ ಕೆಟ್ಟು ನಿಂತಿತ್ತು. ಅದಕ್ಕೆ ಬಟ್ಟೆ ಮತ್ತಿತರ ವಸ್ತುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಡಿಕ್ಕಿ ಹೊಡೆದಿದೆ. ಇದಾದ ಕೆಲ ಸಮಯದಲ್ಲಿ ಕಲ್ಲಂಗಡಿ ತುಂಬಿದ್ದ ಲಾರಿ ಕೂಡ ಡಿಕ್ಕಿ ಹೊಡೆದೆ.

ದುರ್ಘಟನೆಯಲ್ಲಿ ಪೆರಿಯಾಸ್ವಾಮಿ, ಮಹಮದ್‌ಕೈಫ್ ಸ್ಥಳದಲ್ಲೇ ಅಸು ನೀಗಿದರೆ, ಚಂದ್ರಶೇಖರ್‌ರೆಡ್ಡಿ ಜಿಲ್ಲಾಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಕಂಟೈನರ್ ಚಾಲಕ ಉತ್ತರಪ್ರದೇಶ ಅಲಿಘರ್‌ಜಿಲ್ಲೆ ಉದ್ಲ ಇಲಿಯಾಸ್ ಪುರದ ಭಜರುದ್ದೀನ್ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಡಿವೈಎಸ್‌ಪಿ ಪಿ.ಕೆ. ದಿನಕರ್, ಅಗ್ನಿಶಾಮಕ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿದ್ದರು. ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net