

ಕಿಕ್ಕೇರಿ: ಸೀತೆ, ಶ್ರೀರಾಮ ದೇವರು ಆದರ್ಶ ಪರಿಪಾಲಕರಾಗಿದ್ದು, ಹಿಂದು ಸಂಸ್ಕೃತಿಗೆ ಮಾದರಿಯಾಗಿದ್ದಾರೆ ಎಂದು ವೇದಬ್ರಹ್ಮ ಅನಿಲ್‌ಶಾಸ್ತ್ರಿ ತಿಳಿಸಿದರು.
ಇಲ್ಲಿನ ಸುಬ್ಬರಾಯ ಛತ್ರದಲ್ಲಿ ವಿಪ್ರ ಬಾಂಧವ ಸೇವಾ ಸಮಿತಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀ ಸೀತಾರಾಮ ದೇವರ ಉಯ್ಯಲೆ ಹಾಗೂ ಶಯನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ, ನಮ್ಮ ಸನಾತನ, ಹಿಂದು ಧರ್ಮ ಸಂಸ್ಕೃತಿ ಬಲು ಸುಂದರವಾಗಿದ್ದು, ತಿಳಿದಷ್ಟು, ಮತ್ತಷ್ಟು ವಿಸ್ತಾರವಾಗಿದೆ ಎಂದರು.
ಶ್ರೀರಾಮ ದೇವರ ಸಂಕೀರ್ತನೆಯಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಹೋಮ, ಹವನಾದಿಗಳಂತಹ ಸತ್ಕಾರ್ಯಗಳಿಂದ ಪ್ರಕೃತಿಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಲಿದೆ. ರಾಮದೇವರ ಪಠಣೆಯಿಂದ ಮಾನಸಿಕ ನೆಮ್ಮದಿ, ಅಭಿವೃದ್ಧಿ ಸಿಗಲಿದೆ. ನಂಬುಗೆ ನಮ್ಮ ಬುದ್ಧಿಶಕ್ತಿಗೆ ಮೀಸಲಿದೆ. ಪೂಜಾರಾಧನೆಯಲ್ಲಿ ವೈಜ್ಞಾನಿಕ ಹಿನ್ನೆಲೆ ಇದೆ. ಶ್ರೀ ಸೀತಾರಾಮರ ಆದರ್ಶಗುಣವನ್ನು ಅಳವಡಿಸಿಕೊಂಡರೆ ಜಗತ್ತಿನ ವಿಪತ್ತು ದೂರವಾಗಲಿದೆ ಎಂದು ನುಡಿದರು.
ಶ್ರೀ ಸೀತಾರಾಮದೇವರಿಗೆ ವಿಶೇಷ ಪೂಜೆಗಳು ನಡೆದವು. ಶ್ರೀ ಸೀತಾರಾಮದೇವರ ಮೂರ್ತಿಯನ್ನು ಪರಿಮಳ ಪುಷ್ಪಗಳಿಂದ ಅಲಂಕಾರ ಮಾಡಲಾಗಿದ್ದ ಉಯ್ಯಲೆಯಲ್ಲಿ ಕೂರಿಸಲಾಯಿತು. ಉಯ್ಯಲೆ ತೂಗಿ ದೇವರಿಗೆ ರಾಮಲಾಲಿ ಗೀತೆಯನ್ನು ಸಾಮೂಹಿಕವಾಗಿ ಹಾಡುತ್ತ ನಮಸ್ಕರಿಸಲಾಯಿತು. ತದನಂತರ ದೇವರನ್ನು ಮಲಗಿಸಿ ಸುಖ ನಿದ್ರೆಗೆ ಜಾರುವಂತೆ ಶಯನೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ತೀರ್ಥ ಪ್ರಸಾದ, ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.
ಅನಂತಸ್ವಾಮಿ, ಕೆ.ಬಿ. ವೆಂಕಟೇಶ್, ಮಹಬಲಶರ್ಮ, ಗಣೇಶ್‌ರಾವ್, ಮಹಬಲರಾವ್, ಪ್ರಭಾಕರ್, ಕೆ.ಎಸ್. ಪರಮೇಶ್ವರಯ್ಯ, ಶ್ರೀಹರಿ, ಶ್ರೀಹರ್ಷ, ಮಧುಶರ್ಮ, ಸೀತಾರಾಮು, ನರಸಿಂಹ, ಚಂದ್ರಶೇಖರಯ್ಯ, ಭಾಗ್ಯಮ್ಮ, ಗಿರಿಜಾ, ಸುಮಾ, ಅನುಷಾ, ವೇದಾವತಿ, ಅನುರಾಧ, ಮೇಘನ, ರಜಿನಿ, ಕಲಾವತಿ ಮತ್ತಿತರರಿದ್ದರು.