

ಔರಾದ್: ಬೆಟ್ಟಗುಡ್ಡಗಳ ಪ್ರದೇಶವಾದ ಗಡಿ ತಾಲೂಕಿನಲ್ಲಿ ಇದೀಗ ಸೀತಾ ಫಲ (ಚಿತಾಪಲ) ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಬಡವರ ಹಣ್ಣು ಖ್ಯಾತಿಯ ಸೀತಾ ಫಲಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಜಂಬಗಿ, ವಿಜಯನಗರ ತಾಂಡಾ, ಸುಂಧಾಳ, ಕರಂಜಿ, ಬರ್ದಾಪುರ, ಕೊಳ್ಳುರ್, ಗಾಂಧಿನಗರ ತಾಂಡಾ, ಗುಡಪಳ್ಳಿ, ಮೇಡಪಳ್ಳಿ, ಉಜನಿ, ಚಿಂತಾಕಿ ಸೇರಿ ಸುತ್ತಮುತ್ತಲ ಗುಡ್ಡಗಾಡು ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆದ ಸೀತಾಫಲ ವ್ಯಾಪಾರ ಜೋರಾಗಿ ನಡೆಯುತ್ತಿದೆ.
ಪ್ರಸಕ್ತ ವರ್ಷ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಸೀತಾಫಲ ಗಿಡಗಳ ಪ್ರಮಾಣ ಜಾಸ್ತಿಯಾಗಿದ್ದು, ಉತ್ತಮ ಇಳುವರಿಯೂ ಬಂದಿದೆ. ಮಾರುಕಟ್ಟೆಯಲ್ಲಿ ಹಣ್ಣಿನ ಬೆಲೆ ಹೆಚ್ಚಾಗಿದೆ. ಮಹಿಳೆಯರು ಗುಡ್ಡಗಳಲ್ಲಿ ಉಚಿತವಾಗಿ ಸಿಗುವ ಸೀತಾಫಲಗಳನ್ನು ಕಡಿದು ತಂದು ಸಮೀಪದ ಹಳ್ಳಿಗಳು ಸೇರಿ ಬೀದರ್, ಭಾಲ್ಕಿ, ಔರಾದ್, ನೆರೆಯ ತೆಲಂಗಾಣದ ನಾರಾಯಣಖೇಡಗಳಲ್ಲಿ ಒಂದು ಹಣ್ಣಿಗೆ 5-10 ರೂ.ವರೆಗೆ ಮಾರಿ ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಿದ್ದಾರೆ. ಹೆಚ್ಚಾಗಿ ಸೀತಾಫಲ ವ್ಯಾಪಾರ ಮಹಿಳೆಯರು ಮಾಡುವುದು ವಿಶೇಷ.
ಬೆಳಗ್ಗೆ ಸೀತಾಫಲ ತುಂಬಿದ ಬುಟ್ಟಿಗಳನ್ನು ಹೊತ್ತು ಪಟ್ಟಣಗಳಿಗೆ ಮಹಿಳೆಯರು ಹೆಜ್ಜೆ ಹಾಕುವ ದೃಶ್ಯ ಸಾಮಾನ್ಯವಾಗಿ ಕಾಣಬಹುದು. ಯಾವುದೇ ತರಹದ ಔಷಧ ಸಿಂಪಡಣೆ ಮಾಡದೆ ನೈಸರ್ಗಿಕವಾಗಿ ಅರಣ್ಯ ಪ್ರದೇಶಗಳಲ್ಲಿ ಬೆಳೆಯುವ ಸೀತಾಫಲ ತಿನ್ನಲು ಬಹಳ ರುಚಿಕರವಾಗಿದ್ದು, ಆರೋಗ್ಯಕ್ಕೂ ಉತ್ತಮ ಎನಿಸಿದೆ.
ಇಂದಿನ ದಿನಗಳಲ್ಲಿ ಎಲ್ಲ ಹಣ್ಣುಗಳಲ್ಲಿ ರಾಸಾಯನಿಕ ಔಷಧ ಬಳಕೆ ಆಗುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಸೀತಾಫಲ ನೈಸರ್ಗಿಕವಾಗಿ ಬೆಳೆಯುವುದರಿಂದ ಆರೋಗ್ಯಕ್ಕೆ ಉತ್ತಮ ವರದಾನವಾಗಿದೆ. ಈ ಹಣ್ಣಿಗೆ ಉತ್ತಮ ಮಾರುಕಟ್ಟೆ ಅಗತ್ಯವಾಗಿದೆ.| ರಿಯಾಜ್ ಪಾಶಾ ಕೊಳ್ಳುರ್, ಪರಿಸರ ಪ್ರೇಮಿ
ಔರಾದ್ ತಾಲೂಕಿನಲ್ಲಿ ಅತಿ ಹೆಚ್ಚು ಕಾಡು ಪ್ರದೇಶವಿದ್ದು, ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದರಿಂದ ಸೀತಾಫಲ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದಿದೆ. ಎರಡು ತಿಂಗಳ ಕಾಲ ಈ ಭಾಗದ ಹಲವಾರು ಗ್ರಾಮಸ್ಥರು ಸೀತಾಫಲ ಮಾರಾಟ ಮಾಡಿ ಕರೊನಾ ಸೃಷ್ಟಿಸಿದ್ದ ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಿದ್ದಾರೆ.| ಅಹ್ಮದ್ ಜಂಬಗಿಯುವ ರೈತ