

ಶಿವಮೊಗ್ಗ: ಸೀಗೆಹಟ್ಟಿ ಪ್ರದೇಶದಲ್ಲಿ ಗುರುವಾರ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ವಾರದಲ್ಲಿ ಎರಡನೇ ಬಾರಿ ಪುನರಾವರ್ತನೆಯಾಗಿದೆ. ಗುರುವಾರ ಮಧ್ಯರಾತ್ರಿ ಕುಬೇರಪ್ಪ ಎಂಬುವರ ಬೈಕ್ ಹಾಗೂ ಶ್ರೀನಿವಾಸ್ ಎಂಬುವರ ಆಟೋಗೆ ಬೆಂಕಿ ಹಚ್ಚಿ ಸಂಪೂರ್ಣ ಹಾನಿಗೀಡಾಗಿವೆ. ಕಿಡಿಗೇಡಿಗಳು ಮಧ್ಯರಾತ್ರಿ ಮನೆ ಮುಂದೆ ನಿಲ್ಲಿಸಿರುವ ವಾಹನಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.
ವಾರದ ಹಿಂದಷ್ಟೇ ಸೀಗೆಹಟ್ಟಿ, ನ್ಯೂ ಮಂಡ್ಲಿ, ಎನ್.ಟಿ.ರಸ್ತೆ, ಇಲಿಯಾಸ್ ನಗರ, ಸವಾಯಿ ಪಾಳ್ಯ ಬಡಾವಣೆಗಳಲ್ಲಿ 2 ಬೈಕ್, ಒಂದು ಕಾರು, ಲಾರಿ ಮತ್ತು ಹಣ್ಣಿನ ಗಾಡಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದರು. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದರೂ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಸ್ಪಿ ವಿರುದ್ಧ ಸಚಿವರು ಗರಂ: ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕ್ತೀರಾ? ಅಥವಾ ನೀವೇ ಇಲ್ಲಿಂದ ಹೋಗ್ತೀರಾ?
ಎಸ್ಪಿ ಶಾಂತರಾಜು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆೆ.ಎಸ್. ಈಶ್ವರಪ್ಪ ತರಾಟೆ ತೆಗೆದುಕೊಂಡ ಪರಿ ಇದು.
ವಾಹನಗಳಿಗೆ ಬೆಂಕಿ ಹಾಕಿದ ಸೀಗೆಹಟ್ಟಿ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದ ಸಚಿವರು, ಒಂದೋ ನೀವು, ಈ ಕೃತ್ಯಗಳಿಗೆ ಇತಿಶ್ರೀ ಹಾಡಲು ಕ್ರಮ ಕೈಗೊಳ್ಳಬೇಕು. ಇಲ್ಲ ನಾವು ಬೇರೆಯವರನ್ನು ತಂದು ಕೂರಿಸಿ ಇಂತಹ ಕೃತ್ಯಗಳಿಗೆ ಇತಿಶ್ರೀ ಹಾಡಬೇಕಾಗುತ್ತದೆ ಎಂದು ನೇರವಾಗಿಯೇ ಎಸ್ಪಿಗೆ ಎಚ್ಚರಿಕೆ ನೀಡಿದರು.
ಆಟೋ, ಕಾರು ಹಾಗೂ ಬೈಕ್ಗಳನ್ನ ಸುಟ್ಟಿರುವ ಕಿಡಿಗೇಡಿಗಳು ಮನೆಗಳಿಗೂ ನುಗ್ಗಿ ಆಯುಧ ಹಿಡಿದು ಬೆದರಿಸಿದ್ದಾರೆ. ಕಾರಿನಲ್ಲಿರುವ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾರೆಂದು ಸ್ಥಳೀಯರು ದೂರು ಹೇಳುತ್ತಿದ್ದಂತೆ ಸಿಟ್ಟಾದ ಸಚಿವರು, ಇಂತಹ ಕೃತ್ಯಗಳು ಪುನರಾವರ್ತನೆಯಾದರೆ ನಿಮ್ಮ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಸ್ಪಿಗೆ ಎಚ್ಚರಿಸಿದರು. ಮಾರಕಾಸ್ತ್ರ ಹಿಡಿದು ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಇದು ನಿಜಕ್ಕೂ ಪೊಲೀಸ್ ಇಲಾಖೆ ವೈಫಲ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಕುವೆಂಪು ನಗರದಲ್ಲಿ ಇತ್ತೀಚೆಗೆ ದರೋಡೆಕೋರರ ಗುಂಪೊಂದು ಕೈಯಲ್ಲಿ ಚಾಕು, ರಾಡ್ ಹಿಡಿದು ಮನೆಗಳಿಗೆ ನುಗ್ಗಿ ಬೆದರಿಸಿ ಹಣ, ಚಿನ್ನಾಭರಣ ದೋಚಿರುವುದು ಗಮನಕ್ಕೆ ಬಂದಿದೆ. ಜನರಿಗೆ ರಕ್ಷಣೆ ನೀಡಬೇಕಾಗಿರುವುದು ಪೊಲೀಸ್ ಇಲಾಖೆ ಕರ್ತವ್ಯ. ಆದರೆ ಪೊಲೀಸರಿಂದ ಅದು ಸಾಧ್ಯವಾಗುತ್ತಿಲ್ಲ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.