

ಮೈಸೂರು: ಸರಗೂರು ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೀಗೆವಾಡಿ ಹಾಡಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿ ಶಿವರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಹಾಡಿಯಲ್ಲಿ ವಾಸಿಸುವ 30 ಜೇನುಕುರುಬ ಸಮುದಾಯ ಕುಟುಂಬಗಳು ಜೀವನಾವಶ್ಯಕ ಸೌಕರ್ಯದಿಂದ ವಂಚಿತವಾಗಿವೆ. ಮನೆ, ಶೌಚಗೃಹ, ರಸ್ತೆ, ಬೀದಿದೀಪ ಇವೆಲ್ಲವೂ ಅಲಭ್ಯವಾಗಿವೆ. ಇದ್ದರೂ ದುಸ್ಥಿತಿಯಲ್ಲಿವೆ. ಕೆಲ ಮನೆಗಳಿಗೆ ವಿದ್ಯುತ್, ನೀರಿನ ಸಮಸ್ಯೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹಾಡಿಗೆ ಸಂಪರ್ಕ ಕಲ್ಪಿಸಲು ಇರುವ ಎರಡು ರಸ್ತೆಗಳು ಸಹ ಸಮಸ್ಯೆಯಲ್ಲಿದೆ. ಈಗಾಗಲೇ ಬಿ.ಮಟಕೆರೆಯಿಂದ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆ ಒತ್ತುವರಿಯಾಗಿದ್ದು, ಅಲ್ಲಿ ರಸ್ತೆ ನಿರ್ಮಿಸಲು ಜಾಗವೇ ಇಲ್ಲದಂತಾಗಿದೆ.
ಇನ್ನೊಂದೆಡೆ ಇರುವ ರಸ್ತೆಯಲ್ಲಿ ಅರಣ್ಯದ ಅಂಚಿನ ಮೂಲಕ ಕೆರೆ ದಾಟಿ ಹೋಗಬೇಕು. ಅಲ್ಲಿ ಮಳೆ ಹೆಚ್ಚಾದಾಗ ಆ ರಸ್ತೆ ಕೆರೆಯ ಬಳಿ ಮುಚ್ಚಿ ಹೋಗುತ್ತದೆ. ಎರಡು ಕಡೆಯಿಂದಲೂ ಹಾಡಿಗೆ ತೆರಳಲು ಅನನುಕೂಲವಾಗುತ್ತಿದೆ. ಈ ಕೂಡಲೇ ಸೀಗೆವಾಡಿ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಲಾಗಿದೆ.
ಮೂಲಸೌಕರ್ಯ ಒದಗಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಅನೇಕ ಬಾರಿ ಮನವಿ ಮಾಡಿದ್ದರೂ ಈ ಹಾಡಿಯ ಯಾವುದೇ ಮನೆಗಳಿಗೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌ ಸಂಪರ್ಕ ಕಲ್ಪಿಸಿರುವುದಿಲ್ಲ.
ಸ್ಥಳೀಯ ಗ್ರಾಪಂ ಸಹ ಸ್ಪಂದಿಸಿಲ್ಲ. ಆದಿವಾಸಿಗಳು ಅರಣ್ಯದಲ್ಲಿ ಬದುಕುವ ಹಕ್ಕು ಕಳೆದುಕೊಂಡು, ನಾಗರಿಕ ಸಮಾಜದಲ್ಲಿ ಬದುಕುವ ವಿಶ್ವಾಸ, ಚಾಕಚಕ್ಯತೆ ಇಲ್ಲದೆ ಅತಂತ್ರರಾಗಿದ್ದಾರೆ. ಅರಣ್ಯ ಇಲಾಖೆ, ಗ್ರಾಪಂ, ತಾಲೂಕು ಆಡಳಿತ, ಗಿರಿಜನ ಅಭಿವೃದ್ಧಿ ಇಲಾಖೆಯ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಕಿಡಿಕಾರಲಾಗಿದೆ.
ಇನ್ನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಬದುಕಿಗಾಗಿ ಹೋರಾಡುತ್ತಿರುವ ಆದಿವಾಸಿಗಳ ಹಕ್ಕು ಹಾಗೂ ಈ ಭಾಗದ ಅರಣ್ಯ ವಾಸಿಗಳ ಹಕ್ಕು ರಕ್ಷಿಸಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ದಸರಾ ಸಂದರ್ಭದಲ್ಲಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.
ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ(ಅಐಒಅಖಇ) ಪರವಾಗಿ ಸಿಗೇವಾಡಿ ಹಾಡಿ ಆದಿವಾಸಿಗಳು ದಸರಾ ಸಂದರ್ಭದಲ್ಲಿಯೇ ಅನಿರ್ದಿಷ್ಟಾವಧಿ ಧರಣಿ ನಡೆಸಲು ಎಚ್ಚರಿಕೆ ನೀಡಲಾಗಿದೆ.
30 ಹೊಸ ಮನೆಗಳು, ಶೌಚಗೃಹ ನಿರ್ಮಿಸಬೇಕು. ಈವರೆಗೆ ತಾತ್ಕಾಲಿಕವಾಗಿ ಮನೆ ಛಾವಣಿ ದುರಸ್ತಿ ಹಾಗೂ ಮಹಿಳೆಯರಿಗೆ ಸಮುದಾಯ ಶೌಚಗೃಹ, ಸ್ನಾನದ ಗೃಹ ನಿರ್ಮಿಸಿ, 15 ಮನೆಗಳಿಗೆ ನಿವೇಶನ ನೀಡಬೇಕು. ಸಿಗೇವಾಡಿ ಹಾಡಿಗೆ ಬಿ.ಮಟಕೆರೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯ ಒತ್ತುವರಿನ್ನು ತೆರವು ಮಾಡಿ ರಸ್ತೆ ನಿರ್ಮಿಸಬೇಕು.
ಅಲ್ಲಿಯವರೆಗೆ ಮೊಳೆಯೂರು ಅರಣ್ಯ ಇಲಾಖೆ ಕಚೇರಿಯಿಂದ ಹಾಡಿಗೆ ಬರುವ ರಸ್ತೆಯನ್ನು ಡಾಂಬರೀಕರಣ ಮಾಡಬೇಕು. ನೀರಿನ ನಲ್ಲಿಗಳ ದುರಸ್ತಿ, ಮನೆಗಳಿಗೆ ನೀರಿನ ಸಂಪರ್ಕದ ವ್ಯವಸ್ಥೆ ಸಮರ್ಪಕವಾಗಿ ಒದಗಿಸಬೇಕು. ಜಲ್‌ಜೀವನ್ ಮಿಷನ್ ಯೋಜನೆಯ ಕಳಪೆ ಕಾಮಗಾರಿಯಿಂದ ಆಗಿರುವ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮಿತಿಯ ಸಂಚಾಲಕರಾದ ಟಿ.ಆರ್.ಸುನೀಲ್, ಹಾಡಿಯ ಮುಖಂಡರಾದ ಕುಮಾರ್, ಮಾರ, ರಾಜೇಶ್, ರಾಜು, ಮಾದೇವ್, ಬಾಬು ಇದ್ದರು.