

ವಿರಾಜಪೇಟೆ: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರ ಪತ್ನಿ ಕಾಂಚನ್ ಪೊನ್ನಣ್ಣ ಅವರು ಶುಕ್ರವಾರ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸುವರ್ಣ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುವರ್ಣ ಕರ್ನಾಟಕ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಒಂದು ವರ್ಷ ಆಚರಣೆ ಮಾಡುವಂತೆ ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಅವರು ನಗರದ ಚಿಕ್ಕಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು.
ಕಾಂಚನ್ ಪೊನ್ನಣ್ಣ ಮಾತನಾಡಿ, ಕನ್ನಡ ನಾಡು, ನುಡಿ, ಜಲ ಸಂರಕ್ಷರಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ರಾಜರ ಆಳ್ವಿಕೆಯಿಂದ ಕೊನೆಯಾಗಿ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಸಂದಿವೆ. ಕರ್ನಾಟಕ ರಾಜ್ಯವು ಮನೆಯಂತಾದರೆ, ಕನ್ನಡ ಭಾಷೆ ಮನಸ್ಸಿನಂತಾಗಬೇಕು. ಮಾತೃಭಾಷೆಗೆ ಮಹತ್ವ ನೀಡಿ ಪರಭಾಷೆಯನ್ನು ಗೌರವಿಸುವಂತಹ ಗುಣಗಳು ನಮ್ಮದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪಕ್ಷದ ಪ್ರಮುಖರಾದ ಜೋಕಿಂ ರೋಡ್ರಿಗ್ರಸ್, ಅಯ್ಯಮಂಡ ಪ್ರವೀಣ್, ಕುಂಡಚ್ಚರ ಮಂಜು ದೇವಯ್ಯ, ಸಯೈದ್ ಶಭೀರ್, ಶಬರೀಶ್ ಮತು ರಕ್ಷೀತ್ ಚೆಂಗಪ್ಪ ಮುಖ್ಯಶಿಕ್ಷಕಿ ಪಿ.ಡಿ.ಅನ್ನಮ್ಮ, ಸಹಶಿಕ್ಷಕರು ಹಾಜರಿದ್ದರು.