

ಚಂದ್ರಶೇಖರ ಎಮ್ಮೆ ಭಾಲ್ಕಿ
ಅಕ್ಷರ ಜ್ಞಾನ ಪಡೆದ ಎಲ್ಲರಿಗೂ ನೌಕರಿ ಸಿಗುವುದು ಕಷ್ಟ ಎಂಬುದನ್ನು ಮನಗಂಡ ಯುವಕನೊಬ್ಬ ಸ್ವಂತ ಬೆಲ್ಲದ ಕಾರ್ಖಾನೆ ಸ್ಥಾಪಿಸುವ ಮೂಲಕ ನೆಮ್ಮದಿ ಬದುಕು ಕಂಡುಕೊಂಡಿದ್ದಾರೆ. ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸಿರುವ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ರಾಹುಲ್ ಮಾಲಿಪಾಟೀಲ್ ಬಾಳಲ್ಲಿ ಬೆಲ್ಲದ ಉದ್ದಿಮೆ ಅಕ್ಷರಶಃ ಸಿಹಿ ತಂದಿದೆ.
ಸ್ವಗ್ರಾಮದಲ್ಲಿ ರಾಹುಲ್ ಆರಂಭಿಸಿರುವ ಲಕ್ಷ್ಮೀ ಜಾಗ್ರಿ ಹೆಸರಿನ ಇಂಡಸ್ಟ್ರಿ ಕೆಮಿಕಲ್ರಹಿತ ಬೆಲ್ಲ ತಯಾರಿಸುತ್ತಿರುವುದು ವಿಶೇಷ. ಉತ್ತಮ ಆದಾಯದ ಜತೆಗೆ ಸುಮಾರು 30 ಕುಟುಂಬಗಳಿಗೆ ಆಶ್ರಯ ನೀಡಿರುವ ಅವರು, ಬೇರೆಯವರ ಸ್ವಾವಲಂಬಿ ಜೀವನಕ್ಕೆ ನೆರವಾಗಿ ಯುವ ಉದ್ಯಮಿಗಳಿಗೆ ಮಾದರಿ ಎನಿಸಿದ್ದಾರೆ.
ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸುತ್ತಲೇ ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿದ ರಾಹುಲ್, ಬೈಕಾನ್ ಫಾರ್ಮಾ ಕಂಪನಿಯಲ್ಲಿ ಸುಮಾರು ಒಂದೂವರೆ ವರ್ಷ ಕೆಲಸ ಮಾಡಿದರು. ನಂತರ ಮಧ್ಯಪ್ರದೇಶದಲ್ಲಿ ಎಲ್ಸಾಮೆಕ್ಸ್ ಮೆಂಟೆನೆನ್ಸ್ ಸರ್ವೀಸಸ್ ಲಿಮಿಟೆಡ್ ಕಂಪನಿಯಲ್ಲಿ ಯಂತ್ರಗಳನ್ನು ನಿಭಾಯಿಸುವ ಸಿವಿಲ್ ಕೆಲಸ ನಿರ್ವಹಿಸಿದರು. ತಂದೆ ಓಂಪ್ರಕಾಶ ಮಾಲಿಪಾಟೀಲ್ ನೀಡಿದ ಸಲಹೆಯಿಂದ ಪ್ರೇರಣೆಗೊಂಡು ತವರೂರಲ್ಲೇ ಸ್ವಂತ ಉದ್ಯೋಗ ಮಾಡಲು ಮುಂದಾಗಿ ಬೆಲ್ಲ ತಯಾರಿಕೆ ಕಾರ್ಖಾನೆ ಪ್ರಾರಂಭಿಸಿದರು.
ವರ್ಷಕ್ಕೆ 100 ಎಕರೆ ಕಬ್ಬು ನುರಿಸುವ ಸಾಮರ್ಥ್ಯ ಈ ಕಾರ್ಖಾನೆ ಹೊಂದಿದೆ. ರಾಹುಲ್ ಅವರಿಗೆ 92 ಎಕರೆ ಜಮೀನು ಇದ್ದು, ಈ ಪೈಕಿ 50 ಎಕರೆಯಲ್ಲಿ ಕಬ್ಬು ಬೆಳೆಸಲಾಗಿದೆ. ಉಳಿದ 50 ಎಕರೆ ಕಬ್ಬನ್ನು ಅಕ್ಕಪಕ್ಕದ ಕೃಷಿಕರಿಂದ ಖರೀದಿಸುತ್ತಾರೆ. ಬೇರೆ ಸಕ್ಕರೆ ಕಾರ್ಖಾನೆಗಳು ನೀಡುವ ಬೆಂಬಲ ಬೆಲೆಯನ್ನೇ ನೀಡುತ್ತಿರುವ ಕಾರಣ ಬೆಳೆಗಾರರ ವಿಶ್ವಾಸಾರ್ಹತೆಗೆ ಪಾತ್ರರಾಗಿದ್ದಾರೆ. ಈ ಬೆಲ್ಲದ ಕಾರ್ಖಾನೆಯಿಂದ ಸಣ್ಣ ಸಣ್ಣ ರೈತರಿಗೂ ಅನೂಕೂಲವಾಗಿದೆ.
ಟನ್ ಕಬ್ಬು ನುರಿಸಿದರೆ 120-130 ಕೆಜಿ ಬೆಲ್ಲ ಉತ್ಪಾದನೆ ಆಗುತ್ತದೆ. ಕನಿಷ್ಠ 500-1500 ರೂಪಾಯಿವರೆಗೆ ಲಾಭ ಸಿಗುತ್ತದೆ. ಈ ಕಾರ್ಖಾನೆ ದಿನಕ್ಕೆ 40-50 ಟನ್ ಕಬ್ಬು ಕ್ರಷಿಂಗ್ ಮಾಡುವ ಕ್ಷಮತೆ ಹೊಂದಿದೆ. ಅಂದರೆ ಪ್ರತಿದಿನ 5200-6500 ಕೆಜಿವರೆಗೆ ಬೆಲ್ಲ ತಯಾರಾಗುತ್ತಿದೆ. ಕಳೆದ ವರ್ಷ 2800 ಟನ್ ಕಬ್ಬು ನುರಿಸಿದ್ದು, 300 ಟನ್ ಬೆಲ್ಲ ಇಳುವರಿ ಬಂದಿತ್ತು. ಕಾರ್ಖಾನೆಯಲ್ಲಿ ಸ್ವಯಂಚಾಲಿತ ಮಷಿನ್ಗಳನ್ನು ಅಳವಡಿಸಿದ್ದರಿಂದ ಕಳೆದ ಸಲಕ್ಕಿಂತ ಈ ಬಾರಿ ಉತ್ಪನ್ನ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ರಾಹುಲ್ ಮಾಲಿಪಾಟೀಲ್.
5 ಕೆಜಿ, 10 ಕೆಜಿ, 15 ಕೆಜಿ ಹೀಗೆ ಬೆಲ್ಲದ ಮುದ್ದೆಗಳನ್ನು ಮಾಡಿ ಕಲಬುರಗಿ, ಲಾತೂರ್, ಸೊಲ್ಲಾಪುರ ಹಾಗೂ ಸ್ಥಳೀಯ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಬೆಲ್ಲಕ್ಕೆ ಭಾರಿ ಬೇಡಿಕೆ ಇರುವುದರಿಂದ ಮಾರಾಟಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಹೇಳುತ್ತಾರೆ ರಾಹುಲ್.
ತಂದೆ ನ್ಯಾಯವಾದಿ ಓಂಪ್ರಕಾಶ ಮಾಲಿಪಾಟೀಲ್ ಬೆಲ್ಲದ ಕಾಖರ್ಾನೆ ಪ್ರಾರಂಭಿಸುವ ಕನಸಿನೊಂದಿಗೆ ನನಗೆ ಮೆಕಾನಿಕಲ್ ಇಂಜಿನಿಯರಿಂಗ್ ಓದಿಸಿದರು. ಇಂದು ಅವರ ಕನಸು ನನಸಾಗಿಸಲು ಮುಂದಾಗಿದ್ದೇನೆ. ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದ್ದರೆ ತಿಂಗಳಿಗೆ 40-50 ಸಾವಿರ ರೂ. ಸಂಬಳ ಸಿಗುತ್ತಿತ್ತು. ಆದರೀಗ ಸ್ವಂತ ಕಾಖರ್ಾನೆ ಪ್ರಾರಂಭಿಸಿದ್ದರಿಂದ ತಿಂಗಳಿಗೆ ಸರಾಸರಿ 1ರಿಂದ 1.5 ಲಕ್ಷ ರೂ. ಕೈ ಸೇರುತ್ತಿದೆ. ಮುಖ್ಯವಾಗಿ ಸುಮಾರು 30 ಕುಟುಂಬಗಳಿಗೆ ಆಶ್ರಯ ನೀಡಿದ್ದು ಖುಷಿ ವಿಚಾರ.
| ರಾಹುಲ್ ಮಾಲಿಪಾಟೀಲ್, ಲಕ್ಷ್ಮೀ ಜಾಗ್ರಿ ಇಂಡಸ್ಟ್ರಿ ಮಾಲೀಕ
ಮಕ್ಕಳಿಗೆ ಒಳ್ಳೆಯ ದಾರಿ ತೋರಿಸುವುದು ಪಾಲಕರ ಕರ್ತವ್ಯ. ನನಗೆ ಸುಮಾರು 30 ವರ್ಷಗಳಿಂದ ಬೆಲ್ಲದ ಕಾರ್ಖಾನೆ ಸ್ಥಾಪಿಸಬೇಕು ಎಂಬ ಆಸೆ ಇತ್ತು. ಈ ನಿಟ್ಟಿನಲ್ಲಿ ಯಂತ್ರಗಳ ಬಗ್ಗೆ ಹೆಚ್ಚಿನ ಜ್ಞಾನ ಸಿಗಬೇಕೆಂಬ ಆಶಯದೊಂದಿಗೆ ರಾಹುಲ್ಗೆ ಮೆಕಾನಿಕಲ್ ಇಂಜಿನಿಯರಿಂಗ್ ಓದಿಸಿದ್ದೇನೆ. ಇದೀಗ ಆತ ಲಕ್ಷ್ಮೀ ಜಾಗ್ರಿ ಇಂಡಸ್ಟ್ರಿಯನ್ನು ಸಮೃದ್ಧವಾಗಿ ನಡೆಸಿಕೊಂಡು ಸಂಪಾದಿಸುವುದಲ್ಲದೆ ಬೇರೆಯವರಿಗೂ ಆಶ್ರಯ ನೀಡಿರುವುದು ಅತೀವ ಸಂತಸ ತಂದುಕೊಟ್ಟಿದೆ.
| ಓಂಪ್ರಕಾಶ ಮಾಲಿಪಾಟೀಲ್, ರಾಹುಲ್ ತಂದೆ