ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ಗಣೇಶೋತ್ಸವ

9 CCTV Camera
Published on

ಡಿ.ವಿ. ಕಮ್ಮಾರ ಬೆಳಗಾವಿ

ಗಣೇಶೋತ್ಸವ ಸುಸೂತ್ರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಇದೇ ಮೊದಲ ಬಾರಿ ನಗರದ ಎಲ್ಲ ಗಣೇಶ ಮಂಟಪಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಗಿದ್ದು, ಎಲ್ಲ ತಯಾರಿಗಳು ನಡೆಯುತ್ತಿವೆ.

ಬೆಳಗಾವಿ ನಗರ ವ್ಯಾಪ್ತಿಯಲ್ಲಿ 378 ನೋಂದಾಯಿತ ಸಾರ್ವಜನಿಕ ಗಣೇಶ ಮಂಟಪಗಳಿವೆ. ಹಗಲು-ರಾತ್ರಿ ಜನರು ವೀಕ್ಷಣೆಗೆ ಬರುತ್ತಾರೆ. ಪೊಲೀಸ್ ಇಲಾಖೆ ಜತೆಗೆ ಆಯಾ ಮಂಡಳಿಗಳಿಂದಲೂ ಸ್ವಯಂಸೇವಕರ ಮೂಲಕ ಭದ್ರತೆ ಒದಗಿಸಲು ಯೋಜಿಸಲಾಗಿದೆ. ಹೀಗಾಗಿ, ಪ್ರತಿ ಮಂಟಪದಲ್ಲೂ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಪೊಲೀಸ್ ಆಯುಕ್ತ ಭೂಷಣ ಬೋರಸೆ ಮೌಖಿಕವಾಗಿ ಸೂಚಿಸಿದ್ದಾರೆ. ಇದಕ್ಕೆ ಕೆಲವೊಂದು ಗಣೇಶ ಉತ್ಸವ ಮಂಡಳಿಗಳು ಸಮ್ಮತಿ ಸೂಚಿಸಿವೆ.

ಕೆಲವು ಮಂಡಳಿಗಳ ಹಿಂದೇಟು: ಗಣೇಶ ಮೂರ್ತಿ, ಮಂಟಪದ ಒಳಗೆ, ಹೊರಭಾಗ ಸೇರಿ ವಿವಿಧೆಡೆ ಕ್ಯಾಮರಾ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಲವರು ಈಗಾಗಲೇ ಕ್ಯಾಮರಾ ಖರೀದಿಸಿದ್ದಾರೆ. 11 ದಿನಕ್ಕೆ ಬಾಡಿಗೆ ಆಧಾರದಲ್ಲಿ ಕ್ಯಾಮರಾ ಪಡೆಯುವ ಪ್ರಯತ್ನವೂ ನಡೆಸುತ್ತಿದ್ದಾರೆ. . ಆದರೆ, ಕೆಲ ಮಂಡಳಿಯವರು ಇದು ನಮಗೆ ಆರ್ಥಿಕವಾಗಿ ಹೊರೆಯಾಗುತ್ತದೆ. ಜತೆಗೆ ಒಂದೊಂದೇ ಹೊಸ ಹೊಸ ನಿಯಮ ತಂದರೆ, ಖರ್ಚು ಹೆಚ್ಚಾಗಲಿದೆ ಎಂದು ಅಲವತ್ತುಕೊಂಡಿದ್ದಾರೆ.

ಐದು ಸ್ವಯಂ ಸೇವಕರ ನೇಮಕ: ಪೊಲೀಸ್ ಇಲಾಖೆ ಪ್ರತಿ ಮಂಡಳಿಯಿಂದ ತಲಾ ಐವರು ಸ್ವಯಂಸೇವಕರನ್ನು ನೇಮಿಸಿಕೊಳ್ಳುತ್ತಿದ್ದು, ಟೋಪಿ ಮತ್ತು ವಿಸಿಲ್ ಇಲಾಖೆಯಿಂದಲೇ ನೀಡಲಾಗುತ್ತಿದೆ. ಇವರು ಗಣೇಶ ಪ್ರತಿಷ್ಠಾಪನೆಯ 11 ದಿನ ಮಂಟಪಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರೊಂದಿಗೆ ಸಹಕರಿಸಲಿದ್ದಾರೆ. ವಿಸರ್ಜನಾ ಮೆರವಣಿಗೆಯಲ್ಲ್ಲೂ ಈ ಸ್ವಯಂಸೇವಕರು ಭದ್ರತೆ ಒದಗಿಸಲಿದ್ದಾರೆ.

ಬಹುತೇಕ ಗಣೇಶ ಮೂರ್ತಿಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣ ಸಹ ಹಾಕಲಾಗುತ್ತದೆ. ಹೀಗಾಗಿ, ಗಣೇಶನ ಮೂರ್ತಿಗೂ ಭದ್ರತೆ ಒದಗಿಸುವ ಅನಿವಾರ್ಯತೆ ಇದೆ. ಹೀಗಾಗಿಯೇ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಹಾಕಲು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ಗಣೇಶ ಮಂಟಪದ ಒಳಗೆ ಕನಿಷ್ಠ ಒಂದು ಕ್ಯಾಮರಾ ಹಾಕಿಕೊಳ್ಳಬೇಕಿದೆ. ಕೆಲವು ಮಂಡಳಿಗಳಿಗೆ ಇದು ಹೊರೆಯಾಗುವುದು ಸತ್ಯ. ಮಂಡಳಿಯವರನ್ನು ಒಪ್ಪಿಸುತ್ತಿದ್ದೇವೆ. | ವಿಕಾಸ ಕಲಘಟಗಿ ಮಹಾಮಂಡಳಿ ಪ್ರತಿನಿಧಿ ಕೆಲವು ಮಂಡಳಿಯವರು ಕ್ಯಾಮರಾ ಹಾಕುವುದಕ್ಕೆ ಆಗುವುದಿಲ್ಲ ಎನ್ನುತ್ತಿದ್ದಾರೆ. ಅಂತಹ ಮಂಡಳಿಗಳ ಮನವೊಲಿಸುತ್ತಿದ್ದೇವೆ. ಗಣೇಶ ಬರುವುದರೊಳಗೆ ಎಲ್ಲ ಮಂಟಪಗಳಲ್ಲಿಯೂ ಸಿಸಿಟಿವಿ ಕ್ಯಾಮರಾ ಇರಲಿವೆ. ಗಣೇಶ ಮೂರ್ತಿಯ ಮೇಲೆ ನಿಗಾವಹಿಸಲಾದರೂ ಕ್ಯಾಮರಾ ಅಳವಡಿಸಿ ಎಂದು ಹೇಳಿದ್ದೇವೆ. | ಭೂಷಣ ಬೋರಸೆ ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net