

ಹುಬ್ಬಳ್ಳಿ/ಅಣ್ಣಿಗೇರಿ: ಇಲ್ಲಿಯ ಎಪಿಎಂಸಿ ಹಾಗೂ ಭಾರತೀಯ ಹತ್ತಿ ನಿಗಮ (ಸಿಸಿಐ)ದ ಆಶ್ರಯದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿ ಪ್ರಕ್ರಿಯೆ ಪುನಾರಂಭಿಸಲಾಗಿದೆ. ಹುಬ್ಬಳ್ಳಿ, ಧಾರವಾಡ ಹಾಗೂ ಅಣ್ಣಿಗೇರಿಯಲ್ಲಿ ಹತ್ತಿ ಖರೀದಿ ನಡೆಯಲಿದೆ.
ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಕೆಲ ದಿನಗಳಿಂದ ಹತ್ತಿ ಖರೀದಿ ಸ್ಥಗಿತಗೊಳಿಸಲಾಗಿತ್ತು. ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಹತ್ತಿಯನ್ನು ಪ್ರತಿ ಕ್ವಿಂಟಾಲ್ಗೆ 5550 ರೂ. ನಂತೆ ಖರೀದಿಸಲಾಗುತ್ತಿದೆ.
ರೈತರು ಮೊದಲು ಇಲ್ಲಿಯ ಅಮರಗೋಳ ಎಪಿಎಂಸಿ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಬೇಕು. ನಂತರ ಕಚೇರಿಯಿಂದ ದೂರವಾಣಿ ಮೂಲಕ ತಿಳಿಸಿದ ರೈತರು ಹತ್ತಿ ತೆಗೆದುಕೊಂಡು ಬರಬೇಕು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾ ಆತಂಕ ಇರುವ ಹಿನ್ನೆಲೆಯಲ್ಲಿ ಎಲ್ಲರೂ ಸರ್ಕಾರದ ಆದೇಶಗಳನ್ನು ಪಾಲನೆ ಮಾಡಬೇಕು. ಖರೀದಿ ಕೇಂದ್ರ ಹಾಗೂ ನೋಂದಣಿಗೆ ಬಂದಾಗ ಪರಸ್ಪರ ಜನರ ಮಧ್ಯೆ ಅಂತರ ಕಾಯ್ದುಕೊಳ್ಳಬೇಕು. ರೈತರು, ಅವರೊಂದಿಗೆ ಬರುವ ವಾಹನ ಚಾಲಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಹತ್ತಿ ತೂಕಕ್ಕೆ ತರುವ ದಿನ ಮೂರು ಪ್ರತಿಗಳಲ್ಲಿ ಉತಾರ, ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ತರಬೇಕು. ಹೆಚ್ಚಿನ ಜನರು ಬರಬಾರದು. ಚೀಲ, ಬಾರದಾನ ಅಥವಾ ಅಂಡಗಿಯಲ್ಲಿ ತೆಗೆದುಕೊಂಡ ಬಂದ ಹತ್ತಿ ಖರೀದಿಸುವುದಿಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಹೇಳಿದ್ದಾರೆ. ಪಿಎಂಸಿ ಕಚೇರಿಯಲ್ಲಿ ಮೇ 5 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಅವರು ಅಣ್ಣಿಗೇರಿಯಲ್ಲಿ ಭಾರತೀಯ ಹತ್ತಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯಲ್ಲಿ ನಿಯಮಾನುಸಾರ ಹತ್ತಿ ಖರೀದಿ ತ್ವರಿತವಾಗಿ ಪ್ರಾರಂಭಿಸುವುದು ಹಾಗೂ ಹತ್ತಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಮಿಲ್ಗಳ ಕಾರ್ಯುರಂಭಕ್ಕೆ ಅನುಮತಿ ನೀಡುವ ಕುರಿತು ಚರ್ಚೆ ನಡೆಸಿದರು.
ಗ್ರೇಡಿಂಗ್ ಬಾರದ ಹತ್ತಿ ಖರೀದಿಗೂ ಒತ್ತಾಯ: ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಗ್ರೇಡಿಂಗ್ ಬಾರದ ಹತ್ತಿಯನ್ನೂ ಖರೀದಿ ಮಾಡುವಂತೆ ಒತ್ತಾಯಿಸಿದ ಪರಿಣಾಮ ಸಿಸಿಐ ಅಧಿಕಾರಿಗಳು ಹಾಗೂ ರೈತರ ಮಧ್ಯೆ ವಾಗ್ವಾದ ನಡೆದ ಘಟನೆ ಮಂಗಳವಾರ ಜರುಗಿದೆ.
ಭಾರತೀಯ ಹತ್ತಿ ನಿಗಮ (ಸಿಸಿಐ)ದಿಂದ ಹತ್ತಿ ಖರೀದಿ ಆರಂಭವಾದ ಮೊದಲ ದಿನವೇ ಗ್ರೇಡಿಂಗ್ ಗೊಂದಲ ಶುರುವಾಗಿದೆ.
ಮಂಗಳವಾರ ಖರೀದಿ ಕೇಂದ್ರಕ್ಕೆ ಐದು ವಾಹನಗಳಲ್ಲಿ ಹತ್ತಿ ತರಲಾಗಿತ್ತು. ಎಫ್ಎಕ್ಯೂ ಗುಣಮಟ್ಟದ ಹತ್ತಿ ಖರೀದಿಸಬೇಕೆಂಬ ನಿಯಮ ಇರುವುದರಿಂದ ಅಧಿಕಾರಿಗಳು ಗುಣಮಟ್ಟ ಇಲ್ಲದ ಮೂರು ಗಾಡಿಗಳಲ್ಲಿದ್ದ ಹತ್ತಿ ಖರೀದಿಗೆ ಒಪ್ಪಲಿಲ್ಲ. ಇದರಿಂದ ರೈತರು ಆಕ್ರೋಶಗೊಂಡು ವಾಗ್ವಾದಕ್ಕಿಳಿದರು. ಮಾತಿನ ಚಕಮಕಿಯೂ ನಡೆಯಿತು.
ನೀವು ಗ್ರೇಡಿಂಗ್ ಪಾಸ್ ಆಗದ ಹತ್ತಿ ಖರೀದಿ ಮಾಡದಿದ್ದರೆ ಬೇಡ. ಇಲ್ಲಿಗೆ ಬರುವ ಎಲ್ಲ ರೈತರ ಹತ್ತಿ ಖರೀದಿ ಮಾಡಬೇಕು. ಒಂದು ವೇಳೆ ಗ್ರೇಡಿಂಗ್ ಬರದೆ ಹೋದರೆ ಆ ಹತ್ತಿಗೆ ತಕ್ಕಂತೆ ದರ ನಿಗದಿ ಮಾಡಿ ಎಂದು ರೈತರು ಒತ್ತಾಯಿಸಿದರು.
ಇದಕ್ಕೆ ಅಧಿಕಾರಿಗಳು ಉತ್ತರಿಸಿ, ಸರ್ಕಾರದ ನಿಯಮಾವಳಿ ಪ್ರಕಾರ ಹತ್ತಿ ಖರೀದಿ ಮಾಡುತ್ತೇವೆ. ಗ್ರೇಡಿಂಗ್ ಬರದಿದ್ದರೆ ಖರೀದಿಸುವುದಿಲ್ಲ ಎಂದು ಈ ಹಿಂದಿನ ಎಲ್ಲ ಸಭೆಗಳಲ್ಲಿ ತಿಳಿಸಿದ್ದೇವೆ ಎಂದರು.
ಇದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಖಾಸಗಿಯವರು ಮನಸೋ ಇಚ್ಚೆ ದರ ನಿಗದಿ ಮಾಡುತ್ತಾರೆ. ಅವರಿಗೆ ಖರೀದಿ ಕೊಡುವ ಸ್ಥಿತಿ ನಿರ್ವಣವಾಗಲಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ಸಭೆ: ಎಪಿಎಂಸಿ ಕಚೇರಿಯಲ್ಲಿ ರೈತ ಮುಖಂಡರು ಹಾಗೂ ಅಧ್ಯಕ್ಷರು, ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಿತು. ರೈತರ ಸಮಸ್ಯೆ ಬಗೆ ಹರಿಯುವರೆಗೂ ಇಲ್ಲಿಯೇ ಇರುತ್ತೇವೆ. ಅಧ್ಯಕ್ಷರು ಹಾಗೂ ತಹಸೀಲ್ದಾರ್ರು ಇದರ ಜವಾಬ್ದಾರಿ ತೆಗೆದುಕೊಂಡು ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಮುಖಂಡರು ಒತ್ತಾಯಿಸಿದರು. ಸಭೆಯಲ್ಲಿ ತಹಸೀಲ್ದಾರ್ ಕೊಟ್ರೇಶ್ವರ ಗಾಳಿ, ಎಪಿಎಂಸಿ ಅಧ್ಯಕ್ಷ ಗುರುನಾಥ ಉಳ್ಳೇಗಡ್ಡಿ, ಸದಸ್ಯ ಯಲ್ಲಪ್ಪ ಅಕ್ಕಿ, ಷಣ್ಮುಖ ಗುರಿಕಾರ, ಸಿಸಿಐ ಅಧಿಕಾರಿ ರವಿಕುಮಾರ ನಾಯ್ಕ, ಶೇಖಣ್ಣ ಬಕ್ಕಣ್ಣವರ, ಅಶೋಕ ಕೊಗ್ಗಿ, ಲೋಹಿತ ದಿಡ್ಡಿ, ರಾಜು ಎಣ್ಣಿ, ಪರಮೇಶ ತಹಶೀಲ್ದಾರ, ಆನಂದ ಕಾಮತ, ಕಾರ್ಯದರ್ಶಿ ಎಂ.ಎಸ್. ದೊಡ್ಡಮನಿ, ರೀಸಿ ಸಾರಂಗಿ ಇತರರು ಉಪಸ್ಥಿತರಿದ್ದರು.