ಸಿಸಿ ಫರ್ವಿುಟ್​ಗೆ ಅಧಿಕ ಶುಲ್ಕ ವಸೂಲಿ ಕೈಬಿಡಿ

17 lxr 1
Published on

ಲಕ್ಷ್ಮೇಶ್ವರ: ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಮ್ಯಾಕ್ಸಿಕ್ಯಾಬ್​ಗಳಿಗೆ ಪ್ರೋರ್ ಏರಿಯಾ ಟ್ಯಾಕ್ಸ್ ತೆಗೆದು ಎಲ್​ಎಂವಿ ಕ್ಯಾಬ್ ಅಂತ ಪರಿವರ್ತನೆ ಮಾಡಿ ಸಿಸಿ ಫರ್ವಿುಟ್​ಗೆ ಅಧಿಕ ಶುಲ್ಕ ವಸೂಲಿ ಮಾಡುವಂತೆ ಬಜೆಟ್​ನಲ್ಲಿನ ಅಂಶವನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಮ್ಯಾಕ್ಸಿಕ್ಯಾಬ್ ಮಾಲೀಕರ ಹಾಗೂ ಚಾಲಕರ ಸಂಘದವರು ತಹಸೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಅನೇಕ ವರ್ಷಗಳಿಂದ ಪ್ರವಾಸೋದ್ಯಮ ಮ್ಯಾಕ್ಸಿಕ್ಯಾಬ್ ವಾಹನಗಳನ್ನೆ ನಂಬಿ ಜೀವನ ಸಾಗಿಸುತ್ತಿದ್ದೇವೆ. 12+1 ಸಾಮರ್ಥ್ಯವುಳ್ಳ ಮ್ಯಾಕ್ಸಿಕ್ಯಾಬ್ ಅನ್ನು ನೋಂದಾಯಿಸಿಕೊಂಡು ಪರವಾನಗಿ ಪಡೆದು ಸಂಚರಿಸುತ್ತಿವೆ. ಆದರೆ, ಇತ್ತೀಚಿನ ಕೆಲ ದಿನಗಳಲ್ಲಿ ಸಾರಿಗೆ ಇಲಾಖೆಯವರು ಮ್ಯಾಕ್ಸಿಕ್ಯಾಬ್​ಗಳಲ್ಲಿ ಹೆಚ್ಚುವರಿ ಆಸನಗಳನ್ನು ಅಳವಡಿಸಿಕೊಂಡು ಸಂಚರಿಸುತ್ತಿದ್ದಾರೆ ಎಂದು ದಂಡ ವಿಧಿಸಿ ವಾಹನ ಜಪ್ತಿ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರವಾಸೋದ್ಯಮ ತಾಣಗಳು ಇಲ್ಲದ್ದರಿಂದ ಮ್ಯಾಕ್ಸಿಕ್ಯಾಬ್ ಅನ್ನೇ ನಂಬಿಕೊಂಡು ಜೀವನ ನಿರ್ವಹಿಸುತ್ತಿರುವ ಎಸ್​ಸಿ, ಎಸ್​ಟಿ, ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರು ಬೀದಿ ಪಾಲಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಸುಮಾರು 70 ಸಾವಿರ ಮ್ಯಾಕ್ಸಿಕ್ಯಾಬ್​ಗಳಿದ್ದು, ಇದನ್ನೇ ನಂಬಿಕೊಂಡು 2 ಲಕ್ಷ ಕುಟುಂಬಗಳು ಜೀವನ ಸಾಗಿಸುತ್ತಿವೆ. ಈ ಕಾನೂನು ಜಾರಿಯಾದರೆ ಇವರೆಲ್ಲ ಬೀದಿ ಪಾಲಾಗುವ ಸಾಧ್ಯತೆಯಿದೆ. ಆದ್ದರಿಂದ ಈಗಿರುವ ತೆರಿಗೆಯನ್ನೇ ಮುಂದುವರಿಸಿ ಬಜೆಟ್​ನಲ್ಲಿ ಮಂಡಿಸಿರುವ ಹೆಚ್ಚಿನ ತೆರಿಗೆ ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮನವಿ ಸ್ವೀಕರಿಸಿದರು. ಮ್ಯಾಕ್ಸಿಕ್ಯಾಬ್ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಬೆಂಗಳೂರು, ಅನಿಲ ಕುಲಕರ್ಣಿ, ಬೂದಯ್ಯ ಪೂಜಾರ, ಯಲ್ಲಪ್ಪ ಕೋಲ್ಕಾರ, ಎಸ್.ಎಂ. ಭದ್ರಾಪುರ, ಆರ್.ಎಂ. ಗಂಗಾಧರಮಠ, ಎಸ್.ಎನ್. ಸಜ್ಜನ, ಬಿ.ಡಿ. ಅಮ್ಮಿನಬಾವಿಮಠ, ಕೆ.ಎಂ. ದಂಡಿನ, ಬಿ.ಎಚ್. ಮೂಲಿಮನಿ, ಎ.ಜಿ. ರಾಹುತ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net