ಸಿಸಿ ಟಿವಿ ಕ್ಯಾಮರಾದಲ್ಲಿ ಚಿರತೆ ಸೆರೆ

03
Published on

ಬೆಳಗಾವಿ: ಇಲ್ಲಿನ ಜಾಧವ ನಗರದ ಜನವಸತಿ ಪ್ರದೇಶದಲ್ಲಿ ಆ.5ರಂದು ಕಾರ್ಮಿಕನೋರ್ವನ ಮೇಲೆ ದಾಳಿ ಮಾಡಿದ್ದ ಚಿರತೆ ಗಾಲ್ಫ್​ ಮೈದಾನದ ಪೊದೆಯಲ್ಲಿ ಓಡಾಡುತ್ತಿರುವ ಚಿತ್ರ ಅರಣ್ಯ ಇಲಾಖೆ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೋಮವಾರ ರಾತ್ರಿ ಸೆರೆಯಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಹನುಮಾನ ನಗರ, ಗಾಲ್ಫ್​ ಮೈದಾನ, ಜಾಧವ ನಗರ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ 16 ಕ್ಯಾಮರಾ ಅಳವಡಿಸಿದ್ದರು. ಅದರಲ್ಲಿ ಗಾಲ್ಫ್​ ಮೈದಾನದಲ್ಲಿ ಅಳವಡಿಸಿರುವ ಕ್ಯಾಮರಾದಲ್ಲಿ ಚಿರತೆ ಫೋಟೋ ಸೆರೆಯಾಗಿದ್ದು, ನಗರದಲ್ಲಿ ಚಿರತೆ ಓಡಾಡುತ್ತಿದೆ. ಚಿರತೆಯ ಚಲನವಲನ ನಿಖರವಾಗಿ ಗೊತ್ತಾಗುತ್ತಿದೆ. ಶ್ರೀ ಚಿರತೆ ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಗಾಲ್ಫ್​ ಮೈದಾನದಲ್ಲಿ ಚಿರತೆ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಮೈದಾನ ಸುತ್ತಮುತ್ತ ಜನರು ಓಡಾಡದಂತೆ ಮಂಗಳವಾರ ಬೆಳಗ್ಗೆಯಿಂದಲೇ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಪ್ರದೇಶದ ವ್ಯಾಪ್ತಿಯ 22 ಶಾಲೆಗಳು ಬುಧವಾರ ರಜೆ ೂಷಣೆ ಮಾಡಲಾಗಿದೆ. ಅಲ್ಲದೆ, ಬೆಳಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಬರಬಾರದು. ರಸ್ತೆಗಳಲ್ಲಿ ಯಾರೂ ಒಂಟಿಯಾಗಿ ಓಡಾಡಬಾರದು.

ಮಕ್ಕಳನ್ನು ಆಟಕ್ಕೆ ಹೊರಗಡೆ ಕಳುಹಿಸದಂತೆ ನಗರ ಪೊಲೀಸ್​ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಸೂಚನೆ ನೀಡಿದ್ದಾರೆ. ಎರಡು ದಿನಗಳಿಂದ ಧಾರಾಕಾರ ಮಳೆಯಿಂದಾಗಿ ಸೋಮವಾರ ಚಿರತೆ ಪತ್ತೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ, ಚಿರತೆಯ ಹೆಜ್ಜೆ ಗುರುತುಗಳು ಸಿಕ್ಕಿಲ್ಲ. ಬೋನು ಅಳವಡಿಸಿರುವ ಎಂಟು ಸ್ಥಳಗಳಲ್ಲಿ ಚಿರತೆ ಕಾಣಿಸಿಕೊಂಡಿಲ್ಲ. ಚಿರತೆ ಪತ್ತೆಗಾಗಿ ನುರಿತ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಎಲ್ಲ ರೀತಿ ಸಹಕಾರ ನೀಡಬೇಕು ಎಂದು ವಲಯ ಅರಣ್ಯ ಅಧಿಕಾರಿ ರಾಕೇಶ ಅರ್ಜುನವಾಡ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net