ಮೈಸೂರು: ಕಳ್ಳರ ಮೇಲೆ ನಿಗಾ ಇಡಲು ಪೊಲೀಸರು ಕಣ್ಗಾವಲಾಗಿ ಇರಿಸಿದ್ದ ಸಿಸಿ ಕ್ಯಾಮೆರಾಗಳ ಬ್ಯಾಟರಿ, ಯುಪಿಎಸ್ ಅನ್ನೇ ಕಳ್ಳರು ಕದ್ದೊಯ್ದಿದ್ದಾರೆ.
ಹೊರ ವರ್ತುಲ ರಸ್ತೆಯ ಪೊಲೀಸ್ ಬಡಾವಣೆ ಬಳಿ ಹಾಗೂ ತಿ.ನರಸೀಪುರ ರಸ್ತೆಯ ಚಿಕ್ಕಹಳ್ಳಿ ಸಮೀಪದ ದೊಡ್ಡ ಆಲದಮರದ ಬಳಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ಬ್ಯಾಟರಿ ಮತ್ತು ಯುಪಿಎಸ್ ಕಳ್ಳತನಲಾಗಿದೆ.
ಬಲವಾದ ಆಯುಧದಿಂದ ಬ್ಯಾಟರಿ, ಯುಪಿಎಸ್ ಇಟ್ಟಿದ್ದ ಕಬ್ಬಿಣದ ತಗಡಿನ ಬಾಕ್ಸ್ ಅನ್ನು ಮೀಟಿ ತೆಗೆದು ಕಳವು ಮಾಡಿದ್ದಾರೆ. ಕ್ಯಾಮೆರಾದಲ್ಲಿ ತಮ್ಮ ಚಲನ, ವಲನ ದಾಖಲಾಗಬಾರದು ಎನ್ನುವ ಕಾರಣಕ್ಕೆ ತಮ್ಮ ವಾಹನವನ್ನು ದೂರದಲ್ಲಿಯೇ ನಿಲ್ಲಿಸಿ, ಕ್ಯಾಮೆರಾ ದೃಷ್ಟಿ ತಮ್ಮ ಮೇಲೆ ಬೀಳದಂತೆ ಅಡ್ಡ ದಾರಿಯಲ್ಲಿ ಬಂದು ಕಳ್ಳತನ ಮಾಡಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ದುಬಾರಿ ಬೆಲೆಯ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಕಳೆದ ಒಂದು ತಿಂಗಳಿಂದ ಹೊರ ವರ್ತುಲ ರಸ್ತೆಯಲ್ಲಿ ಬೀದಿ ದೀಪಗಳನ್ನು ಹಾಕುತ್ತಿಲ್ಲ. ಪಾಲಿಕೆ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಸೆಸ್ಕ್‌ನವರು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ. ಇದರ ಲಾಭ ಪಡೆದ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.