

ಆನೇಕಲ್: ಹೆನ್ನಾಗರ ಸಮೀಪದ ಕಾಚನಾಯಕನಹಳ್ಳಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಸ್ಸಾಂ ಮೂಲದ ಬಿದನ್ ದಾಸ್(28), ಧಯಾಲ್ ಶಾಂತಿ(27) ಹಾಗೂ ಗುಲಾಬ ಕರ್ಮಕರ(26) ಗಾಯಗೊಂಡವರು. ಕಾಚನಾಯಕನಹಳ್ಳಿಯ ರಮೇಶ್ ಅವರ ಮನೆಯನ್ನು ಬಾಡಿಗೆಗೆ ಪಡೆದು ವಾಸವಿದ್ದ ಅಸ್ಸಾಂ ಮೂಲದ ಮೂವರೂ ಕಾರ್ಮಿಕರು, ಭಾನುವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗುವಾಗ ಗ್ಯಾಸ್ ಬಂದ್ ಮಾಡದೆ ಮಲಗಿದ್ದರು. ಗ್ಯಾಸ್ ಲೀಕೇಜ್ ಆಗಿ ಇಡೀ ಮನೆಯನ್ನು ಆವರಿಸಿತ್ತು, ಬೆಳಗ್ಗೆ ಎದ್ದು ಲೈಟ್ ಹಾಕುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ, ಅಕ್ಕಪಕ್ಕದ ನಿವಾಸಿಗಳು ಸೂರ್ಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸಹಾಯದ ಮೇರೆಗೆ ಲೀಕೇಜ್ ಆಗುತ್ತಿದ್ದ ಸಿಲಿಂಡರ್ ಹೊರಗೆ ತೆಗೆದು, ಮೂವರನ್ನೂ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿಲಿಂಡರ್ ಸ್ಫೋಟದ ರಭಸಕ್ಕೆ ಬಾಗಿಲು ಹಾಗೂ ಕಿಟಕಿಗಳು ಸಂಪೂರ್ಣ ಛಿದ್ರವಾಗಿವೆ. ಬಿದನ್ ದಾಸ್ ಸ್ಥಿತಿ ಗಂಭೀರವಾಗಿದೆ. ಇಬ್ಬರು ಕಾರ್ಮಿಕರಿಗೆ ಶೇ.50 ಸುಟ್ಟ ಗಾಯಗಳು ಆಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಚನಾಯಕನಹಳ್ಳಿಯ ಐಕಾನ್ ಬಡಾವಣೆಯಲ್ಲಿ ಮೂವರು ಕಾರ್ಮಿಕರು ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದರು.
ಮನೆಯೇ ಗೋದಾಮು : ಕಾಚನಾಯಕನಹಳ್ಳಿ ಸುತ್ತಮುತ್ತ ಜಿಗಣಿ ಕೈಗಾರಿಕಾ ಪ್ರದೇಶ ಇರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ಹೊರ ರಾಜ್ಯದ ಕಾರ್ಮಿಕರು ಹಾಗೂ ಕಂಪನಿಗಳ ಮಾಲೀಕರು ಅಕ್ರಮವಾಗಿ ಮನೆ ಪಡೆದು ಮನೆಯಲ್ಲೇ ಗೋದಾಮಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.