

ರಾಜೇಶ್ ಎಸ್.ಜಿ.ಮುಕ್ಕೇನಹಳ್ಳಿ ದೊಡ್ಡಬಳ್ಳಾಪುರ
ಐಷಾರಾಮಿ ಬಂಗಲೆಗಳನ್ನು ಹೊಂದಿರುವ ಬಸವೇಶ್ವರ ನಗರದಲ್ಲಿ ಮೂಲಸೌಕರ್ಯಕ್ಕೆ ಬರ ಎದುರಾಗಿದೆ. ಸ್ಥಿತಿವಂತರ ಬಡಾವಣೆ ಎಂಬ ಹೆಸರಿದ್ದರೂ ರಸ್ತೆ, ಚರಂಡಿಗಳ ಅವ್ಯವಸ್ಥೆ ಬಡಾವಣೆಗೆ ಕಪ್ಪುಚುಕ್ಕೆಯಾಗಿದೆ.
ಬಸವೇಶ್ವರ ಮತ್ತು ಕುವೆಂಪು ನಗರವನ್ನು ಒಳಗೊಂಡ ವಾರ್ಡ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಎದುರಿಗಿದ್ದರೂ ನಗರಸಭೆ ಕೈಕಟ್ಟಿ ಕುಳಿತಿದೆ. ಶೇ.85 ಭಾಗದಲ್ಲಿ ಚರಂಡಿ ವ್ಯವಸ್ಥೆ ಸೇರಿ ಸಮರ್ಪಕ ರಸ್ತೆಗಳು ಇಲ್ಲದಾಗಿದೆ. ಸುಮಾರು 148 ಚರಂಡಿಗಳ ನಿರ್ಮಾಣ ಆಗಬೇಕಿದ್ದು, ಇದುವರೆಗೆ ಡಾಂಬರೀಕರಣವನ್ನೇ ಕಾಣದ 78 ರಸ್ತೆಗಳು ಅಭಿವೃದ್ಧಿ ಎದುರು ನೋಡುತ್ತಿವೆ.
ಗಬ್ಬು ನಾರುತ್ತಿರುವ ನಿವೇಶನ: ವಾರ್ಡ್‌ನಲ್ಲಿ ಹೆಚ್ಚಿನ ನಿವೇಶನಗಳು ಕಸ ಸುರಿವ ತಾಣವಾಗಿ ಪರಿವರ್ತನೆಯಾಗಿವೆ. ಇದರ ಜತೆಗೆ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದ್ದು ನೆರೆ-ಹೊರೆಯವರಿಗೆ ನಿವೇಶಗಳು ಕಿರಿಕಿರಿ ಎನಿಸಿವೆ. ನಿವೇಶನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಎಚ್ಚರಿಕೆ ನೀಡುವುದು ನಗರಸಭೆ ಆಡಳಿತದ ಮೊದಲ ಕರ್ತವ್ಯವಾಗಬೇಕಿದೆ.
ಸ್ವಚ್ಛತೆಗೆ ಆದ್ಯತೆ: ಚರಂಡಿ ಸ್ವಚ್ಛತೆ, ಸೇರಿ ವಾರ್ಡ್‌ನ ಸ್ವಚ್ಛತೆಗೆ ಒತ್ತು ನೀಡುವಲ್ಲಿ ಸದಸ್ಯ ಎಸ್.ಪದ್ಮನಾಭ್ ಶ್ರಮಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಾ, ತಾವು ಸಸಿ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
20 ಮನೆಗಳಿಗೆ ಇಲ್ಲ ವಿದ್ಯುತ್: ಬಸವೇಶ್ವರ ನಗರದಲ್ಲಿ 66 ಕೆವಿ ವಿದ್ಯುತ್ ಲೈನ್ ಹಾದು ಹೋಗಿದ್ದು, ತಂತಿ ಹಾದು ಹೋಗುವ ಮಾರ್ಗದಲ್ಲಿ ಮನೆ ನಿರ್ಮಾಣ ನಿಷೇಧಿಸಲಾಗಿದೆ. ಪ್ರಸ್ತುತ ಲೈನ್ ಕೆಳಗಿನ ಸುಮಾರು 25 ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಾಗಿದೆ. ಇನ್ನು ಸಾಮಾನ್ಯ ವಿದ್ಯುತ್ ಕಂಬಗಳ ವಿದ್ಯುತ್ ಲೈನ್ ನೇತು ಬೀಳುವ ಮೂಲಕ ವಾರ್ಡ್‌ನ ಜನಕ್ಕೆ ಸುರಕ್ಷತೆ ಇಲ್ಲದಾಗಿದೆ. ಸಿದ್ದಿವಿನಾಯಕ ರಸ್ತೆಯಲ್ಲಿರುವ ರಾಜಕಾಲುವೆ ತಡೆಗೋಡೆ ಇಲ್ಲದೆ ಸಮರ್ಪಕವಾಗಿಲ್ಲದೆ ವಾಹನ ಸವಾರರು ಸ್ಪಲ್ಪ ಎಚ್ಚರ ತಪ್ಪಿದರೂ ಚರಂಡಿ ಪಾಲಾಗುವ ಅಪಾಯವಿದೆ.
ವಾರ್ಡ್‌ಗೆ ಪಾರ್ಕ್, ಅಗತ್ಯ ರಸ್ತೆಗಳು, ಚರಂಡಿಗಳ ನಿರ್ಮಾಣ ಅಗತ್ಯವಾಗಿ ಆಗಬೇಕಿದೆ. ರಸ್ತೆಗಳು, ಚರಂಡಿಗಳು ಇಲ್ಲದೆ ವಾರ್ಡ್‌ನಲ್ಲಿ ಮಳೆ ಬಂದರೆ ನಡೆದಾಡಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಇದರ ಜತೆಗೆ ನೀರಿನ ಸಮಸ್ಯೆ ನೀಗಿಸಬೇಕಾಗಿದೆ. ನಮ್ಮ ವಾರ್ಡ್‌ಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುತ್ತೇನೆ. ಎಸ್.ಪದ್ಮನಾಭ್, ನಗರಸಭೆ ಸದಸ್ಯ, ಬಸವೇಶ್ವರನಗರ ವಾರ್ಡ್‌ನಲ್ಲಿ ಚರಂಡಿ, ರಸ್ತೆಗಳು ಇಲ್ಲದೆ ಇರುವುದು ದೊಡ್ಡ ಸಮಸ್ಯೆಯಾಗಿದೆ. ಕೂಡಲೇ ಅಗತ್ಯ ರಸ್ತೆಗಳಿಗಾದರೂ ಪ್ರಾಮುಖ್ಯತೆ ಕೊಡಬೇಕಿದೆ, ನೀರಿನ ಸಮಸ್ಯೆಯೂ ಇದೆ, ಹೊಸದಾಗಿ ಆಡಳಿತ ಹಿಡಿದಿರುವ ಜನಪ್ರತಿನಿಧಿಗಳಾದರೂ ಇನ್ನು ಮುಂದೆ ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವರೇ ಎಂದು ಕಾದು ನೋಡುತ್ತಿದ್ದೇವೆ. ಮಂಜುನಾಥ್, ಸ್ಥಳೀಯ