ಸಿರಿಧ್ಯಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲಿ

20
Published on

ಮೈಸೂರು: ಸಿರಿಧಾನ್ಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿಕೊಡುವ ಅವಶ್ಯಕತೆ ಇದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.


ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಅಂಗವಾಗಿ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ, ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಮತ್ತು ಇತರ ಸಂಸ್ಥೆಗಳ ಸಹಯೋಗದಲ್ಲಿ ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನದ ಸಿರಿಧಾನ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.


ಬಹಳಷ್ಟು ಕೃಷಿಕರಿಗೆ ಸಿರಿಧಾನ್ಯದ ಬೆಳೆಯುವ ಆಸಕ್ತಿ ಇದೆ. ಆದರೆ, ಉತ್ತಮ ಮಾರುಕಟ್ಟೆ ದೊರೆಯುತ್ತಿಲ್ಲ. ಇದನ್ನು ಬಳಕೆ ಮಾಡುವ ಗ್ರಾಹಕರು ಬಹಳಷ್ಟು ಜನರಿದ್ದಾರೆ. ಅವರಿಗೂ ಉತ್ಪನ್ನಗಳು ದೊರೆಯುತ್ತಿಲ್ಲ. ಆದ್ದರಿಂದ ಉತ್ತಮ ಮಾರುಕಟ್ಟೆ ಸಿಕ್ಕರೆ ಸಿರಿಧ್ಯಾನ ಕೃಷಿಗೆ ಉತ್ತೇಜನ ದೊರೆಯಲಿದೆ. ವೈಜ್ಞಾನಿಕ ಬೆಲೆ ದೊರೆಯುವ ಸಿರಿಧಾನ್ಯವನ್ನೇ ರೈತರು ಬೆಳೆಯುತ್ತಾರೆ. ಗ್ರಾಹಕರ ಸಂಖ್ಯೆಯೂ ಇನ್ನಷ್ಟು ವೃದ್ಧಿಯಾಗಲಿದೆ ಎಂದರು.


ಇತ್ತೀಚೆಗೆ ಸಾವಯವ ಕೃಷಿ ಉತ್ಪನ್ನಗಳು, ಸಿರಿಧಾನ್ಯ ಬಳಕೆಯತ್ತ ಜನರು ಆಕರ್ಷಿತರಾಗಿದ್ದಾರೆ. ಮಧುಮೇಹ ಇರುವವರು ರಾಗಿ, ಗೋಧಿ ಹೆಚ್ಚಾಗಿ ಬಳಸುತ್ತಾರೆ. ಈ ಪೈಕಿ ಸಿರಿ ಧಾನ್ಯ ಆರೋಗ್ಯಕ್ಕೆ ಉತ್ತಮವಾಗಿದೆ. ಸುಲಭವಾಗಿ ಮಾರುಕಟ್ಟೆಯಲ್ಲಿ ಇದು ದೊರೆಯುವಂತಾಗಬೇಕು ಎಂದರು.
ಸಿರಿಧಾನ್ಯಗಳು ಕೃಷಿ ಲೋಕದ ಸಂಪತ್ತು. ಒಂದೊಮ್ಮೆ ನಿರ್ಲಕ್ಷೃಕ್ಕೆ ಈಡಾಗಿದ್ದ ಇದು ಮತ್ತೆ ಜನಪ್ರಿಯವಾಗುತ್ತಿದೆ. ಜನರ ಆರೋಗ್ಯಕ್ಕೂ, ಪರಿಸರಕ್ಕೂ ಒಳಿತು ಮಾಡುವ ಸಿರಿಧಾನ್ಯಗಳು ಭವಿಷ್ಯದ ಆಹಾರಗಳು ಎಂದರು.


ಮನುಷ್ಯನಿಗೆ ಆರೋಗ್ಯ ಮುಖ್ಯ. ಬೇರೆ ಎಲ್ಲವನ್ನೂ ಗಳಿಸಬಹುದು. ಆದರೆ, ಆರೋಗ್ಯ ಗಳಿಸಲು ಆಗಲ್ಲ. ಆರೋಗ್ಯ ಹದಗೆಡುವಷ್ಟು ಜನರು ಸಂಪಾದನೆ ಮಾಡುತ್ತಾರೆ. ನಂತರ ಆರೋಗ್ಯಕ್ಕಾಗಿ ಅದನ್ನು ಖರ್ಚು ಮಾಡುತ್ತಾರೆ. ಆದ್ದರಿಂದ ಆರೋಗ್ಯದ ಕಡೆ ಎಲ್ಲ ಗಮನ ನೀಡಬೇಕು ಎಂದರು.
ಆಧುನಿಕ, ಐಷಾರಾಮಿ ಕೇಂದ್ರಿತ ಜೀವನಶೈಲಿಯ ದೇಹವನ್ನು ಕಾಯಿಲೆಗಳ ಗೂಡಾಗಿಸಿದೆ. ಔಷಧಗಳು ಆಹಾರ ಎಂಬಂತಾಗಿರುವ ಇಂದಿನ ದಿನಗಳಲ್ಲಿ ಆಹಾರವೇ ಔಷಧಯಾಗುವ ಅಗತ್ಯ ಇದೆ. ಆರೋಗ್ಯ ಕಾಪಾಡಿಕೊಳ್ಳಲು ಸಿರಿಧಾನ್ಯಗಳು ಉತ್ತಮ ದಾರಿ ಆಗಿದೆ ಎಂದರು.


ಪ್ರತಿಯೊಂದು ಆಹಾರ ಪದಾರ್ಥಗಳಲ್ಲೂ ಕಲಬೆರಕೆ ಸಾಮಾನ್ಯ ಎನಿಸಿದೆ. ಧಾನ್ಯಗಳಲ್ಲೂ ಕಲಬೆರಕೆ ಕಂಡುಬರುತ್ತಿರುವುದು ಆಘಾತಕಾರಿ ಸಂಗತಿ. ಇದನ್ನು ತಡೆಯಲು ಕ್ರಮ ವಹಿಸಬೇಕಾಗಿದೆ ಎಂದರು.
ಕೃಷಿಯಲ್ಲಿ ರಾಸಾಯಿಕ ವಸ್ತುಗಳ ಬಳಕೆ ಅಧಿಕವಾಗಿದೆ. ಇದು ಪರಿಸರ, ಕೃಷಿ ಮತ್ತು ಮನುಷ್ಯ ಆರೋಗ್ಯಕ್ಕೂ ಹಾನಿ ಉಂಟು ಮಾಡುತ್ತಿದೆ. ಆದ್ದರಿಂದ ರಾಸಾಯನಿಕ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು. ಸಾವಯವ ಕೃಷಿಗೆ ಉತ್ತೇಜನ ನೀಡಬೇಕಾಗಿದೆ. ಇದರೊಂದಿಗೆ ಕೃಷಿ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬಹುದು ಎಂದರು.


ಶಾಸ್ತ್ರೀಯ ನೃತ್ಯಗಾರ್ತಿ, ನಟಿ ಯಮುನಾ ಶ್ರೀನಿಧಿ ಮಾತನಾಡಿ, ಪೌಷ್ಟಿಕ ಆಹಾರ ಸೇವನೆಯಿಂದ ದೇಹಕ್ಕೆ ರೋಗನಿರೋಧಕ ಶಕ್ತಿ ಸಿಗುತ್ತದೆ. ಜಂಕ್‌ಫುಡ್ ಬದಲಿಗೆ ಸಿರಿಧಾನ್ಯಗಳ ತಿಂಡಿ ತಿನಿಸುಗಳ ಸೇವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.


ಕೀ ಸ್ಟೋನ್ ಪ್ರತಿಷ್ಠಾನದ ಸಂಸ್ಥಾಪಕಿ ಸ್ನೇಹಲತಾ ನಾಥ್ ಮಾತನಾಡಿ, ಬುಡಕಟ್ಟು ಸಮುದಾಯಗಳು ನೂರಾರು ವರ್ಷಗಳಿಂದ ಸಂರಕ್ಷಿಸಿಕೊಂಡು ಬಂದಿದ್ದ ಸಿರಿಧಾನ್ಯಗಳು ಇದೀಗ ವಾಣಿಜ್ಯ ಬೆಳೆಗಳ ಅಬ್ಬರದಲ್ಲಿ ಮರೆಯಾಗಿವೆ. ಪೌಷ್ಟಿಕಾಂಶದ ಆಗರವಾದ ಸಿರಿಧಾನ್ಯಗಳ ಮಹತ್ವನ್ನು ರೈತರು, ಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.


ಧಾರವಾಡ ಜಿಲ್ಲೆಯ ರಾಮಾಪುರದ ಸಿರಿಧಾನ್ಯ ಸಂರಕ್ಷಕಿ ಸಾವಿತ್ರಿ ಕೊಡ್ಲಿ ಅವರು ಹಳೇ ತಳಿಗಳನ್ನು ಮತ್ತೆ ಬೇಸಾಯ ಲೋಕಕ್ಕೆ ತಂದು ಅವುಗಳ ಮೌಲ್ಯವರ್ಧನೆ ಮಾಡುವ ಪ್ರಯತ್ನವನ್ನು ತಿಳಿಸಿಕೊಟ್ಟರು.


ಸಹಜ ಆರ್ಗ್ಯಾನಿಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಸೋಮೇಶ್, ಸುತ್ತೂರಿನ ಜೆಎಸ್‌ಎಸ್ ಕೆವಿಕೆಯ ಪ್ರಭಾರ ಮುಖ್ಯಸ್ಥೆ ಎಚ್.ವಿ.ದಿವ್ಯಾ, ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಸೇರಿದಂತೆ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net