ಸಿರಿಧಾನ್ಯಗಳ ಸೇವನೆ ಹೆಚ್ಚಾಗಲಿ: ಡಾ.ಬಿ.ಆರ್. ಪೂರ್ಣಿಮಾ ಸಲಹೆ

ಸಿರಿಧಾನ್ಯಗಳ ಸೇವನೆ ಹೆಚ್ಚಾಗಲಿ: ಡಾ.ಬಿ.ಆರ್. ಪೂರ್ಣಿಮಾ ಸಲಹೆ
Published on

ಹಾಸನ: ಆಧುನಿಕತೆಯ ಬದುಕಿನಲ್ಲಿ ಪೋಷಕ ಭರಿತ ಆಹಾರಗಳಲ್ಲಿ ತೃಣ ಧಾನ್ಯಗಳು ಕಣ್ಮರೆಯಾಗುತ್ತಿವೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಹುಲ್ಲು ಬೆಳೆಗಳ ಗುಂಪಿಗೆ ಸೇರುವ ಈ ಕಿರು ಧಾನ್ಯಗಳು ಎಲ್ಲ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿವೆ. ಇವುಗಳನ್ನು ಎಲ್ಲರೂ ಸೇವಿಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಬಿ.ಆರ್. ಪೂರ್ಣಿಮಾ ಅವರು ತಿಳಿಸಿದರು.

ಅಂತಾರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ 2025ರ ಅಂಗವಾಗಿ ಗುರುವಾರ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿರಿಧಾನ್ಯದ ಬೆಳೆಗಳು ಅತೀ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಕಡಿಮೆ ಫಲವತ್ತತೆ ಹೊಂದಿದ ಭೂಮಿಗಳಲ್ಲಿ ಹಾಗೂ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಬೆಳೆಯಬಹುದು. ಕಲಬೆರಕೆ ಆಹಾರ ಪಧಾರ್ಥಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಡುತ್ತಿದ್ದು, ಪ್ರಜ್ಞಾವಂತರಾಗಿ ನಾವು ಆಹಾರದ ಆಯ್ಕೆ ಮತ್ತು ಸೇವನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಮಾತನಾಡಿ, ಸಿರಿಧಾನ್ಯಗಳು ಪೋಷಕಾಂಶಗಳ ಖಜಾನೆ. ಹಾಗಾಗಿ ಇವುಗಳನ್ನು ದಿನನಿತ್ಯದ ಆಹಾರವಾಗಿ ಬಳಸುವುದರಿಂದ ಹಲವಾರು ರೋಗಗಳಾದ ರಕ್ತದ ಒತ್ತಡ, ಮಧುಮೇಹವನ್ನು ತಡೆಗಟ್ಟಬಹುದು. ತೂಕ ನಿಯಂತ್ರಿಸಬಹುದು ಮತ್ತು ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸಲು, ಅವುಗಳ ಪೋಷಕಾಂಶಗಳ ಉಪಯೋಗ ಹಾಗೂ ಮಹತ್ವವನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಆರೋಗ್ಯಕ್ಕೆ ಸೂಕ್ತವಾದ ಸಿರಿಧಾನ್ಯಗಳನ್ನು ಆದಷ್ಟು ಮಟ್ಟಿಗೆ ನಮ್ಮ ದೈನಂದಿನ ಆಹಾರದಲ್ಲಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಪರಿಸ್ಥಿತಿಯಲ್ಲಿ ಅವಶ್ಯಯಾಗಿದೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ, ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಮುಖ್ಯ ಉದ್ದೇಶಗಳೊಂದಿಗೆ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ 2025ಅನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಸದರಿ ಕಾರ್ಯಕ್ರಮದಲ್ಲಿ ರೈತರಿಂದ ಸಿರಿಧಾನ್ಯಗಳನ್ನು ಕೊಳ್ಳುವ ಖರೀದಿದಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ರೈತರ ಸಿರಿಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಒದಗಿಸಿಕೊಡಲು ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಅವಕಾಶ ನೀಡಲಾಗುವುದು. ಆಹಾರ ತಜ್ಞರು, ಸಗಟು ವ್ಯಾಪಾರಿಗಳು, ಸಮೂಹ ಮಾಧ್ಯಮಗಳ ಮೂಲಕ ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳ ಬಳಕೆ ಕುರಿತು ಗ್ರಾಹಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಿರಿಧಾನ್ಯ ಉತ್ಪನ್ನಗಳನ್ನು ಬಳಸಿ ಆಹಾರ ತಯಾರಿಸಬೇಕು ಎಂದು ಸಲಹೆ ನೀಡಿದರು.

ಪಾಕಸ್ಪರ್ಧೆಯಲ್ಲಿ ಜಿಲ್ಲೆಯ ಒಟ್ಟು 22 ಜನರು ಭಾಗವಹಿಸಿ, ಸಿರಿಧಾನ್ಯ ತಿನಿಸು (ಸಿಹಿ, ಖಾರ ಮತ್ತು ಮರೆತು ಹೋದ ಖಾದ್ಯ) ತಯಾರಿಸಿ ಪ್ರದರ್ಶಿಸಿದರು. ಭಾಗವಹಿಸಿದ್ದ ಸ್ಫರ್ಧಿಗಳಲ್ಲಿ ಹಾಸನದ ಕಾವ್ಯಾ ಅವರು ಸಿರಿಧಾನ್ಯದಿಂದ ತಯಾರಿಸಿದ ಲಾಲಿ ಪಾಪ್, ಹಾರಕ ಕಟ್ಲೆಟ್ ಪ್ರದರ್ಶಿಸಿ ಮೊದಲ ಸ್ಥಾನವನ್ನು (ಖಾರ ತಿನಿಸು) ಪಡೆದರೆ, ಕಸಬಾದ ನಾಗರತ್ನಾ ಅವರು ಸಿರಿಧಾನ್ಯದಿಂದ ತಯಾರಿಸಿದ ಸಿರಿಧಾನ್ಯ ಲಡ್ಡು ತಯಾರಿಸಿ (ಸಿಹಿ ತಿನಿಸು) ಮೊದಲ ಸ್ಥಾನ ಪಡೆದರು. ಮರೆತು ಹೋದ ಖಾಧ್ಯ ಸ್ಪರ್ಧೆಯಲ್ಲಿ ಸಕಲೇಶಪುರ ತಾಲೂಕಿನ ದೆಬ್ಬೆಗದ್ದೆ ದಿವ್ಯಾ ಕಾಂತರಾಜು ಅವರು ಕೆಸುವಿನ ವಡೆ, ಅಂಗು, ನಾಟಿ ಸೌತೆಕಾಯಿ ಇಡ್ಲಿ ತಯಾರಿಸಿ ಮೊದಲನೇ ಸ್ಥಾನ ಪಡೆದರು. ಕತೆಗೆ, ರಂಗೋಲಿ ಸ್ಪರ್ಧೆಯನ್ನೂ ಸಹ ಆಯೋಜನೆ ಮಾಡಲಾಗಿದ್ದು, ಜಿಲ್ಲೆಯ ಒಟ್ಟು 16 ಜನರು ಭಾಗವಹಿಸಿದ್ದರು. ಪ್ರಥಮ ಬಹುಮಾನವನ್ನು ಹಾಸನದ ಭವ್ಯಾ ಪಡೆದಿದರು.

ಸ್ಪರ್ಧೆಯ ತೀರ್ಪುಗಾರರಾಗಿ ನಬಾರ್ಡ್ ಬ್ಯಾಂಕ್‌ನ ಡಿಡಿಎಂ ಮಾಲಿನಿ ಸುವರ್ಣಾ, ಕಂದಲಿ ಕೆವಿಕೆಯ ವಿಜ್ಞಾನಿ ಡಾ. ಶಿವಶಂಕರ್, ಗೃಹ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಜೇಶ್ವರಿ, ಆಕಾಶವಾಣಿಯ ಕೃಷಿ ರಂಗ ವಿಭಾಗದ ಮಧುಸೂದನ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕರಾದ ಅಶೋಕ್, ಕೋಕಿಲಾ, ಕೃಷಿ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಹಾಗೂ ಮತ್ತಿತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net