ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯವರ್ಧನೆ

14 01
Published on

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ, 2 ದಿನಗಳ ಜಿಲ್ಲಾಮಟ್ಟದ ಹಬ್ಬ, ಕಾರ್ಯಾಗಾರಕ್ಕೆ ಚಾಲನೆ

ತುಮಕೂರು: ಸಿರಿಧಾನ್ಯಗಳ ತವರೂರು ತುಮಕೂರು ಜಿಲ್ಲೆ. ಸಿರಿಧಾನ್ಯ ಕುರಿತು ಜನಾಂದೋಲನ ರೂಪಿಸಿ ರಾಜ್ಯವನ್ನು ಸಿರಿಧಾನ್ಯಗಳ ಜಾಗತಿಕ ಕೇಂದ್ರವನ್ನಾಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ 2 ದಿನಗಳ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸಿರಿಧಾನ್ಯಗಳು ರೋಗ ನಿರೋಧಕ ಶಕ್ತಿಯೊಂದಿಗೆ ಹೇರಳವಾದ ಪೋಷಕಾಂಶ ಗಳನ್ನು ಹೊಂದಿವೆ. ಸಿರಿಧಾನ್ಯ ಸೇವನೆಯಿಂದ ಆರೋಗ್ಯ ವರ್ಧನೆಯಾಗುವುದಲ್ಲದೆ ರೋಗ ಮುಕ್ತರಾಗಿರಬಹುದು ಎಂದರು.

ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಮಾತನಾಡಿ, ರೈತರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸಬೇಕು. ಸಿರಿಧಾನ್ಯ ಬೆಳೆಗಾರರಿಗೆ ಆಧುನಿಕ ತಂತ್ರಜ್ಞಾನ ಬಳಸಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಂತೆ ಹೇಳಿದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮಾತನಾಡಿ, ಸರ್ಕಾರವು ಸಿರಿಧಾನ್ಯ ಬೆಳೆ ಬೆಳೆಯಲು ಉತ್ತೇಜನ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಿರಿಧಾನ್ಯದ ಮಹತ್ವದ ಬಗ್ಗೆ ರೈತರು ಹಾಗೂ ಜನಸಾಮಾನ್ಯರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಎತ್ತಿನ ಬಂಡಿಯಲ್ಲಿ ಪರಂ ಮೆರವಣಿಗೆ:ಕೃಷಿಕರ ಮೆರವಣಿಗೆಯಲ್ಲಿ ಎತ್ತಿನ ಬಂಡಿ ಏರಿದ ಸಚಿವ ಪರಮೇಶ್ವರ ಹಸಿರು ಶಾಲಿನ ಪೇಟ ಕಟ್ಟಿಕೊಂಡು ರೈತನಂತೆ ಕಂಡರು. ಡಿಸಿ ಶುಭಕಲ್ಯಾಣ್​, ಸಿಇಒ ಜಿ.ಪ್ರಭು ಸಹ ಬಂಡಿ ಏರಿದರು. ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನ ಪಡೆಯುವ ಮೂಲಕ ರಾಜ್ಯವು ಶ್ವೇತ ಕ್ರಾಂತಿಗೂ ಮುನ್ನುಡಿ ಹಾಡಿದೆ. ಹಸಿರು ಕ್ರಾಂತಿ, ಶ್ವೇತಕ್ರಾಂತಿಯೊಂದಿಗೆ ಶಿಕ್ಷಣ ಕ್ರಾಂತಿಯೂ ಸಹ ದೇಶದ ಅಭಿವೃದ್ಧಿಗೆ ಬುನಾದಿಯಾಗಿದೆ. ಸ್ವಾತಂತ್ರ$್ಯ ಸಂದರ್ಭದಲ್ಲಿ ಕೇವಲ ಶೇ.12ರಷ್ಟಿದ್ದ ಸಾಕ್ಷರತೆ ಪ್ರಮಾಣ ಪ್ರಸ್ತುತ ಶೇ.80ಕ್ಕೆ ತಲುಪಿದೆ. ಶಿಕ್ಷಣ ಕ್ರಾಂತಿಯಿಂದ ವಿಶ್ವದಲ್ಲಿ ಅತಿ ಹೆಚ್ಚು ತಾಂತ್ರಿಕ ಮಾನವ ಸಂಪನ್ಮೂಲ ಶಕ್ತಿ ಉತ್ಪಾದನೆಯಾಗುತ್ತಿರುವ ಹೆಗ್ಗಳಿಕೆಗೆ ನಮ್ಮ ದೇಶ ಪಾತ್ರವಾಗಿದೆ. ಕ್ರಾಂತಿಕಾರಕ ಬದಲಾವಣೆಗಳಿಂದ ದೇಶವು ವಿಶ್ವದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಚಿವ ಜಿ.ಪರಮೇಶ್ವರ ತಿಳಿಸಿದರು.

4.95 ಲಕ್ಷ ಟನ್​ ಉತ್ಪಾದನೆ: ಜಿಲ್ಲೆಯಲ್ಲಿ ಸುಮಾರು 1400 ಹೆಕ್ಟೇರ್​ ಪ್ರದೇಶದಲ್ಲಿ ಸಾಮೆ, ನವಣೆ, ಕೊರಲೆ, ಹಾರಕ, ಸಜ್ಜೆಯಂತಹ ಸಿರಿಧಾನ್ಯಗಳನ್ನು ಬೆಳೆದು ಅಂದಾಜು 4.95 ಲಕ್ಷ ಟನ್​ ಸಿರಿಧಾನ್ಯವನ್ನು ಉತ್ಪಾದಿಸಲಾಗುತ್ತಿದೆ. ಸಿರಿಧಾನ್ಯ ಬೆಳೆಯ ವಿಸ್ತೀರ್ಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ಮಾರ್ಗದರ್ಶನದೊಂದಿಗೆ ಉತ್ತೇಜನ ನೀಡುವಂತೆ ಪರಮೇಶ್ವರ ಸೂಚನೆ ನೀಡಿದರು. ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಕೃಷಿಕರೇ ಮೂಲಾಧಾರ. ಭಾರತವು ಅಭಿವೃದ್ಧಿ ಪಥದಲ್ಲಿ ಗುರುತಿಸಿಕೊಳ್ಳಲು ರೈತರೇ ಕಾರಣ. 1960ರಲ್ಲಿ ಜನರ ಒಪ್ಪೊತ್ತಿನ ಊಟಕ್ಕೂ ಬವಣೆ ಎದುರಿಸುತ್ತಿದ್ದ ದೇಶದಲ್ಲಿ 1980ರ ಹಸಿರು ಕ್ರಾಂತಿಯು ಜನಸಾಮಾನ್ಯರಿಗೆ ಸಾಕಾಗುವಷ್ಟು ಆಹಾರ ಧಾನ್ಯಗಳ ಉತ್ಪಾದನೆ ಮಾಡುವ ಸಾಮರ್ಥ್ಯ ತಂದುಕೊಟ್ಟಿತು. ಪ್ರಸ್ತುತ ಹೊರ ದೇಶಗಳಿಗೆ ರಫ್ತು ಮಾಡುವಷ್ಟು ಆಹಾರಧಾನ್ಯ ಉತ್ಪಾದನೆ ಮಾಡುವ ಮೂಲಕ ನಮ್ಮ ದೇಶ ಶಕ್ತಿಯುತವಾಗಿದೆ. ರೈತರ ಶ್ರಮದಿಂದಲೇ ಈ ಕಾರ್ಯಸಾಧುವಾಗಿದೆ ಎಂದು ತಿಳಿಸಿದರು.

ಸಿರಿಧಾನ್ಯಗಳ ಪೌಷ್ಟಿಕ ಆಹಾರದ ಮಹತ್ವ ತಿಳಿಸುವ ಉದ್ದೇಶದಿಂದ ಈ ಸಿರಿಧಾನ್ಯ ಹಬ್ಬ ಆಯೋಜಿಸಲಾಗಿದೆ. ಕಡಿಮೆ ಮಳೆ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ನೀಡುವ ಸಿರಿಧಾನ್ಯ ಬೆಳೆಯಲು ಸುಧಾರಿತ ಬೇಸಾಯ ಕ್ರಮಗಳ ಅವಶ್ಯಕತೆ ಇರುವುದಿಲ್ಲ. ಸಿರಿಧಾನ್ಯ ಬೆಳೆ ಬೆಳೆಯಲು ಉತ್ತೇಜಿಸುವ ಸಲುವಾಗಿ ರೈತ ಸಿರಿ ಯೋಜನೆಯಡಿ ಪ್ರತಿ ಹೆಕ್ಟೇರ್​ಗೆ 10,000 ರೂ. ಪ್ರೋತ್ಸಾಹ ಧನ ನೀಡಲಾಗುವುದು. | ಡಾ.ಎನ್​.ರಮೇಶ್​ ಜಂಟಿಕೃಷ್ಣ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net