ಹುಬ್ಬಳ್ಳಿ: ಸ್ವದೇಶಿ ಹರಿಕಾರ, ರಾಷ್ಟ್ರೀಯ ಯುವ ಸಂತ ಶ್ರೀ ರಾಜೀವ್ ದೀಕ್ಷಿತ್ರ 55 ನೇ ಜಯಂತ್ಯುತ್ಸವ ಮತ್ತು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ-2023ರ ಅಂಗವಾಗಿ ರಾಜೀವ್ ದೀಕ್ಷಿತ್ ವಿಚಾರ ವೇದಿಕೆ ಕರ್ನಾಟಕ ಧಾರವಾಡ ಘಟಕದ ವತಿಯಿಂದ ಧಾರವಾಡ ಜಿಲ್ಲೆಯಲ್ಲಿ ಡಿ.5 ಮತ್ತು 6ರಂದು ವಿವಿಧೆಡೆ ಸಿರಿಧಾನ್ಯದ ಕುರಿತು ಸಮಾಲೋಚನೆ ಹಾಗೂ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ವೇದಿಕೆಯ ಮುಖ್ಯಸ್ಥ ಎಂ.ಡಿ. ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿರಿಧಾನ್ಯ ಸಂತ, ಆಹಾರ ತಜ್ಞ ಡಾ. ಖಾದರ್ವಲಿ ಅವರ ನೇತೃತ್ವದಲ್ಲಿ ಡಿ. 5ರಂದು ‘ಕಾಡು ಕೃಷಿ ಮತ್ತು ಸಿರಿಧಾನ್ಯ ಬೆಳೆ ಮೇಲೆ ಕಾಡುತ್ತಿರುವ ಎಲ್ಲ ಕೃಷಿ ಸಮಸ್ಯೆಗಳಿಗೆ ಉತ್ತರ’ ವಿಷಯವಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 11 ಗಂಟೆಗೆ, ‘ಆಸ್ಪತ್ರೆ ಮತ್ತು ಡಾಕ್ಟರ್ಗಳಿಲ್ಲದೆ ಸಿರಿಧಾನ್ಯಗಳಿಂದ ಆರೋಗ್ಯ ರಕ್ಷಿಸಿಕೊಳ್ಳುವುದು ಹೇಗೆ?’ ಎಂಬ ವಿಷಯವಾಗಿ ವಿದ್ಯಾವರ್ಧಕ ಸಂಘದಲ್ಲಿ ಸಂಜೆ 5 ಗಂಟೆಗೆ ಕಾರ್ಯಾಗಾರ ನಡೆಯಲಿದೆ ಎಂದರು.
ಡಿ. 6ರಂದು ‘ಸಿರಿಧಾನ್ಯಗಳು-ವಿಷವಲ್ಲದ ವಿಸ್ಮಯ ಆಹಾರ’ ವಿಷಯವಾಗಿ ಬೆಳಗ್ಗೆ 9ಕ್ಕೆ ರಾಯಾಪುರದ ಜಿಟಿಟಿಸಿ ತರಬೇತಿ ಕೇಂದ್ರದಲ್ಲಿ, ಬೆಳಗ್ಗೆ 11.30ಕ್ಕೆ ಆರೋಗ್ಯ ‘ಸಿರಿ ಸಿರಿಧಾನ್ಯ’ ವಿಷಯವಾಗಿ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ, ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಸಂಜೀವಿನಿ ಆಯುರ್ವೆದ ಕಾಲೇಜಿನಲ್ಲಿ ಕಾರ್ಯಾಗಾರ ನಡೆಯಲಿದೆ ಎಂದರು.
ಪುರುಷೋತ್ತಮ ಮಾಡಿಕರ, ಎಂ.ವಿ. ಪಾಟೀಲ, ಶಿವಾನಂದ ಕುಂಬಾರ ಸುದ್ದಿಗೋಷ್ಠಿಯಲ್ಲಿದ್ದರು.