

ಸೋರಲಮಾವು ಶ್ರೀಹರ್ಷ ತುಮಕೂರು
ರಾಜ್ಯದಲ್ಲಿಯೇ ಅತೀ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ತುಮಕೂರು ಜಿಲ್ಲೆ ಸಿರಿಧಾನ್ಯಗಳ ತವರು ಎನ್ನಿಸಿದೆ. ಆದರೆ, ಪ್ರಪಂಚದೆಲ್ಲೆಡೆ ಸಿರಿಧಾನ್ಯಕ್ಕೆ ಮನ್ನಣೆ ದೊರೆಯಲಾರಂಭಿಸಿದ ಈ ಕಾಲಕ್ಕೆ ಬೆಳೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಆತಂಕದ ವಿಷಯವಾಗಿದೆ.
ಭವಿಷ್ಯದಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿಸಿಕೊಳ್ಳಲಿರುವ ಸಿರಿಧಾನ್ಯವನ್ನು ಬೆಳೆಯಲು ರೈತರಿಗೆ ಉತ್ತೇಜನದ ಅಗತ್ಯವಿದೆ. ವರ್ಷಕ್ಕೊಮ್ಮೆ ಸಿರಿಧಾನ್ಯ ಮೇಳ, ವಾಕಥಾನ್, ಹಬ್ಬ ಎಂದು ಕಾರ್ಯಕ್ರಮ ಆಯೋಜಿಸಿ ಪ್ರಚಾರ ಪಡೆಯುವ ಸರ್ಕಾರ ನಂತರ ಮೌನವಹಿಸುತ್ತಿರುವುದು ಅಪರೂಪದ ಬೆಳೆಯ ಗ್ರಾಹಕರಿಗೆ ಅರಿವಿನ ಕೊರತೆ ಮೂಡಿಸಿದೆ. ರಾಜಸ್ಥಾನ ಬಿಟ್ಟರೆ ಅತೀ ಹೆಚ್ಚು ಬರಗಾಲಕ್ಕೆ ತುತ್ತಾಗುವ ಕರ್ನಾಟಕದ ಬರಕ್ಕೆ ಸಿರಿಧಾನ್ಯ ಪರ್ಯಾಯ ಎನ್ನಿಸಿಕೊಂಡಿದೆ. ವಾರ್ಷಿಕ 350 ಮಿಮೀ ಮಳೆ ಬೀಳುವ ಬರದ ಸೀಮೆಯಲ್ಲಿಯೂ ಸಿರಿಧಾನ್ಯ ಉತ್ತಮ ಇಳುವರಿ ನೀಡಬಲ್ಲದು. ತುಮಕೂರು, ಚಿತ್ರದುರ್ಗ ಭಾಗದಲ್ಲಿವ ವಾತಾವರಣ ಇಂತಹ ಬೆಳೆಗಳಿಗೆ ಹೇಳಿಮಾಡಿಸಿದಂತಿದೆ. ಸಾವಯವ ಉದ್ಯಮದಲ್ಲಿ ಭಾರತದಲ್ಲಿ ಆದಾಯ 4.5 ಬಿಲಿಯನ್ ಡಾಲರ್ಗೆ ಹೆಚ್ಚಳ ವಾಗಿದೆ, ಪ್ರತಿವರ್ಷ ಶೇ.12ರಷ್ಟು ಹೆಚ್ಚಾ ಗುತ್ತಿದೆ. ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಸಿರಿ ಧಾನ್ಯಗಳ ಬಗ್ಗೆ ಅಧ್ಯಯಕ್ಕೆ ಸಂಶೋ ಧನಾ ಸಂಸ್ಥೆಯ ಅಭಾವ ರಾಜ್ಯದಲ್ಲಿದೆ. ಸಂಸ್ಕರಣೆ ಹಾಗೂ ಮಾರಾಟಕ್ಕೆ ಅನುಕೂಲ ಮಾಡಲು ಸಿರಿಧಾನ್ಯ ಬೆಳೆಗಾರರ ಒಕ್ಕೂಟ ರಚನೆ ಅಗತ್ಯವಾಗಿದೆ. ನಬಾರ್ಡ್ ಹಾಗೂ ಸರ್ಕಾರ ಸಿರಿಧಾನ್ಯ ಬೆಳೆಗಾರರಿಗಾಗಿ ಸೂಕ್ತ ದಾಸ್ತಾನು, ಸಂಸ್ಕರಣೆಗೆ ಯೋಜನೆ ರೂಪಿಸಬೇಕು ಎಂಬ ಒತ್ತಾಯವಿದೆ. ಜತೆಗೆ ಸಿರಿಧಾನ್ಯಗಳಿಗೆ ಬೆಂಬಲ ಬೆಲೆ, ಸಂಸ್ಕರಣೆ, ವಿಮೆ ಸೌಲಭ್ಯ ಒದಗಿಸಬೇಕು. ಸಂಸ್ಕರಣಾ ಯಂತ್ರಗಳನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ಕೂಡ ಅಗತ್ಯವಿದೆ. ಅಕ್ಕಿ, ಗೋಧಿಗೆ ಹೋಲಿಸಿದರೆ ಸಿರಿಧಾನ್ಯಗಳು ರುಚಿ ಮತ್ತು ಪೌಷ್ಟಿಕತೆ ದುಪ್ಪಟ್ಟು ಎಂಬುದನ್ನು ಜನರಿಗೆ ತಿಳಿಸುವ ಅಗತ್ಯವಿದೆ.
ಜಿಲ್ಲೆಯಲ್ಲಿ ಬೆಳೆದಿದ್ದು 5423 ರೈತರು!: ತುಮಕೂರು ಜಿಲ್ಲೆಯಲ್ಲಿ ಹಿಂದೆಲ್ಲಾ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆದು ರೈತರು ಬಳಸುತ್ತಿದ್ದ ಕಾಲ ಸಂಪೂರ್ಣ ಬದಲಾಗಿದ್ದು, ಪ್ರಸ್ತುತ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವ ಗುರಿ ಮುಟ್ಟಲು ಕೃಷಿ ಇಲಾಖೆ ಹರಸಾಹಸ ಪಡುತ್ತಿದೆ. ಜಿಲ್ಲೆಯಲ್ಲಿ 4.5 ಲಕ್ಷ ರೈತರು 2.50 ಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿದ್ದರೂ. 2023ರಲ್ಲಿ 582 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಸಿರಿಧಾನ್ಯ ಬೆಳೆದಿದ್ದಾರೆ. ಈ ರೈತರಿಗೆ ಹೆಕ್ಟೇರ್ಗೆ 10 ಸಾವಿರ ರೂ. ನಂತೆ 2.9 ಕೋಟಿ ರೂ. ಸಹಾಯಧನ ನೀಡಲಾಗಿದೆ. 2024ರಲ್ಲಿ 1368 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗಿದೆ.
ಹೆಚ್ಚಿನ ನೆರವು ಅಗತ್ಯ: ಬಹುಪಯೋಗಿ ಸಿರಿಧಾನ್ಯಗಳ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ವಿವಿ, ವೈದ್ಯಕಿಯ, ಸಿರಿಧಾನ್ಯ ಸಂಸ್ಥೆಗಳು ಕಾರ್ಯ ಪ್ರವೃತ್ತರಾಗಬೇಕು. ಸರ್ಕಾರ ಸಿರಿಧಾನ್ಯ ಬಳಕೆಯ ಅನುಕೂಲಗಳ ಬಗ್ಗೆ ನಡೆಸುವ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಬೇಕು. ಈಗಾಗಲೇ ದೃಢವಾಗಿರುವಂತೆ ಲಿವರ್ ಸಮಸ್ಯೆಗೆ ಊದಲು, ಜೀರ್ಣಾಂಗಕ್ಕೆ ಕೊರಲೆ, ನರಮಂಡಲದಕ್ಕೆ ನವಣೆ ಹಾಗೂ ಸಂತಾನೋತ್ಪತ್ತಿಗೆ ಸಾಮೆ ಸಹಕಾರಿ ಎಂಬುದನ್ನು ಪ್ರಚೂರ ಪಡಿಸಬೇಕು. ಸಹಕಾರ ಸಂಗಳ ಮೂಲಕ ಸಿರಿಧಾನ್ಯ ಉತ್ಪಾದನೆಗೆ ಸರ್ಕಾರ ಇನ್ನೂ ಹೆಚ್ಚು ನೆರವು ನೀಡುವ ಅಗತ್ಯವಿದೆ. ಎಲ್ಲೆಡೆಯೂ ರೈತರನ್ನು ಸಂಟಿಸಿ, ಸಣ್ಣ ಕೈಗಾರಿಕೆಗಳ ಜತೆ ಹೊಂದಿಸಿ ಹೆಚ್ಚು ಲಾಭ ಪಡೆಯಲು ಅನುಕೂಲವಾಗುವಂತೆ "ಸಿರಿಧಾನ್ಯ ಅಭಿವೃದ್ಧಿ ಮಂಡಳಿ' ರಚಿಸಬೇಕು ಎಂಬ ಬಹುದಿನದ ಬೇಡಿಕೆಗೆ ಮನ್ನಣೆ ಸಿಗಬೇಕಿದೆ.
ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಗ್ರಾಹಕರಲ್ಲಿ ಅರಿವು ಮೂಡಿಸಲು 2017ರಿಂದಲೂ ಸಿರಿಧಾನ್ಯಗಳ ಕುರಿತು ಜನಾಂದೋಲಯ ಪ್ರಚಾರ ನಡೆಸಲಾಗುತ್ತಿದೆ. ಜ.23ರಿಂದ 25ರ ವರೆಗೂ ಬೆಂಗಳೂರು ಅರಮನೆ ಮೈದಾನದಲ್ಲಿ 3 ದಿನ ಸಿರಿಧಾನ್ ಮೇಳ&2025 ಹಮ್ಮಿಕೊಳ್ಳಲಾಗಿದೆ. ತುಮಕೂರಿನಲ್ಲಿಯೂ ಇಂದು ಬೆಳಗ್ಗೆ 6.30ರಿಂದ ತುಮಕೂರು ವಿವಿ ಮುಂಭಾಗದಿಂದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದವರೆಗೆ ವಾಕಥಾನ್ ಏರ್ಪಡಿಸಲಾಗಿದೆ.
| ಡಾ.ರಮೇಶ್ ಕೃಷಿ ಜಂಟಿ ನಿರ್ದೇಶಕ
ಚಿಕ್ಕನಾಯಕನಹಳ್ಳಿ, ಹೊಸದುರ್ಗ ಭಾಗ ಭಾರತದ ಸಿರಿಧಾನ್ಯಗಳ ರಾಜಧಾನಿ ಎನ್ನಿಸಿದ್ದು, ಸಿರಿಧಾನ್ಯ ನಮ್ಮ ನೆಲದ ಬೆಳೆ, ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಯನ್ನು ಅಸಹಜವಾಗಿ ಬೆಳೆದುನಮ್ಮ ಬೆಳೆ ಮರೆತು ಮಾಡಿದ ತಪ್ಪು ತಡವಾಗ ಅರಿವಾಗುತ್ತಿದೆ. ಸರ್ಕಾರ ಕೃಷಿ ನೀತಿಯಲ್ಲಿ ಬದಲಾವಣೆ ಜತೆಗೆ ಸಿರಿಧಾನ್ಯ ಬೆಳೆಯಲು ಇನ್ನಷ್ಟು ಪ್ರೋತ್ಸಾಹ ನೀಡುವ ಅಗತ್ಯವಿದೆ. | ಪ್ರಕಾಶ್ ರೈತ, ಹೊನ್ನಶೆಟ್ಟಿಹಳ್ಳಿ