

ಹಾಸನ: ತಮ್ಮ ಮನೆಗಳಲ್ಲಿ ಪ್ರತಿಯೊಬ್ಬರೂ ಸಿರಿಧಾನ್ಯವನ್ನು ಬಳಸುವುದರ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮಾ ಸಲಹೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೃಷಿ ಕಾಲೇಜು ಕಾರೆಕೆರೆ ಹಾಗೂ ಹಾಸನ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಬಳಕೆ ಕುರಿತು ಅರಿವು ಮೂಡಿಸುವ ಜಾಥಗೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಾನು ಕಳೆದ ಹಲವಾರು ವರ್ಷಗಳಿಂದಲೂ ಸಿರಿಧಾನ್ಯವನ್ನು ಉಪಯೋಗಿಸುತ್ತಿದ್ದು, ಅದರ ಪ್ರಯೋಜನವನ್ನು ಪಡೆಯುತ್ತಿದ್ದಾನೆ. ಆಧುನಿಕತೆಯ ಬದುಕಿನಲ್ಲಿ ಪೋಷಕಾಂಶಯುಕ್ತ ಆಹಾರವಾದ ಸಿರಿ ಧಾನ್ಯಗಳು ಕಣ್ಮರೆಯಾಗುತ್ತಿರುವುದು ಕಂಡು ಬಂದಿರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಿರಿಧಾನ್ಯಗಳು ಮನುಷ್ಯರಿಗೆ ಅವಶ್ಯವಿರುವ ಎಲ್ಲಾ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಇದೆ. ದಿನನಿತ್ಯ ಸಿರಿಧಾನ್ಯಗಳನ್ನು ನಿಯಮಿತವಾಗಿ ಬಳಸುವುದರಿಂದ ರಕ್ತದ ಒತ್ತಡ, ಮಧುಮೇಹ ಸೇರಿದಂತೆ ಹಲವಾರು ರೋಗಗಳನ್ನು ತಡೆಗಟ್ಟಬಹುದು. ತಮ್ಮ ತಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ಸಿರಿಧಾನ್ಯವನ್ನು ಬಳಕೆ ಮಾಡುವುದರ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಿರಿ. ಸಿರಿಧಾನ್ಯದ ಬೆಳೆಗಳು ಅತೀ ಕಡಿಮೆ ಮಳೆ ಬೀಳುವ ಮಳೆಯಾಶ್ರಿತ ಪ್ರದೇಶದಲ್ಲಿ ಕಡಿಮೆ ಫಲವತ್ತತೆ ಹೊಂದಿದ ಭೂಮಿಗಳಲ್ಲಿ ಹಾಗೂ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಬೆಳೆಯಬಹುದು ಎಂದು ಹೇಳಿದರು.
ವಿಶ್ವಸಂಸ್ಥೆಯ 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಣೆ ಮಾಡಿದೆ. ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ 2024ರ ಜನವರಿ 5ರಿಂದ 7ರವರೆಗೂ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಮತ್ತು ಸಾವಯವ ಜಾಗೃತಿ ಜಾಥವು ಜಿಲ್ಲಾ ಕ್ರೀಡಾಂಗಣದಿಂದ ಹೊರಟು ಸಾಲಗಾಮೆ ರಸ್ತೆ, ಸಹ್ಯಾದ್ರಿ ವೃತ್ತ, ಮಹಾವೀರ ವೃತ್ತದಿಂದ ಹೇಮಾವತಿ ಪ್ರತಿಮೆ ಮುಂಭಾಗ ಮುಕ್ತಾಯಗೊಂಡಿತು.
ಜಾಥದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಎಂ.ಎನ್. ರಾಜಸುಲೋಚನಾ, ಕೃಷಿಕ್ ಸಮಾಜದ ಜಿಲ್ಲಾಧ್ಯಕ್ಷ ತಮ್ಲಾಪುರ ಕೃಷ್ಣೇಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಕೆ. ನಾಗೇಶ್, ಖಜಾಂಚಿ ರವಿಕುಮಾರ್ ಬಲ್ಲೇನಹಳ್ಳಿ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸೋಮಶೇಖರ್, ರೋಟರಿ ಕ್ಲಬ್ ಗಿರೀಶ್, ಇಲಾಖೆಯ ಕೋಕಿಲಾ, ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಲೀಲಾವತಿ, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ, ಹಿರಿಯ ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.