ಸಿರಿಧಾನ್ಯ ಬಳಕೆಯಿಂದ ಆರೋಗ್ಯ ವೃದ್ಧಿ

19 HRS 01
ಹಿರೀಸಾವೆ ಹೋಬಳಿ ದಿಡಗ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಸಿರಿಧಾನ್ಯಗಳ ಪಾಕ ಸ್ವರ್ಧೆಗೆ ನಬಾರ್ಡ್ ಬ್ಯಾಂಕ್ ಡಿಡಿಎಂ ಮಾಲಿನಿ ಎಸ್.ಸುವರ್ಣ ಚಾಲನೆ ನೀಡಿದರು. ಡಾ.ಶಿವಕುಮಾರ್, ಡಾ.ರಾಜ್‌ಶೇಖರ್, ಡಾ.ಸಂಕೇತ್, ಎಸ್.ಜಿ.ಚಕ್ರವರ್ತಿ, ಬಿ.ಎನ್.ರಂಗಪ್ಪ ಇದ್ದರು.
Published on

ಹಿರೀಸಾವೆ: ಸಿರಿಧಾನ್ಯಗಳ ಜತೆಗೆ ಸಾವಯವ ಕೃಷಿ ಅನುಸರಿಸಿ ಬೆಳೆಯುವ ಆಹಾರ ಪದಾರ್ಥಗಳನ್ನು ಉಪಯೋಗಿಸಿದರೆ ಆರೋಗ್ಯ ವೃದ್ಧಿಯಾಗಲಿದೆ ಎಂದು ನಬಾರ್ಡ್ ಬ್ಯಾಂಕ್ ಡಿಡಿಎಂ ಮಾಲಿನಿ ಎಸ್.ಸುವರ್ಣ ಹೇಳಿದರು.

ಹೋಬಳಿಯ ದಿಡಗ ಗ್ರಾಮದ ಬಾಹುಬಲಿ ಕೃಷಿ ರೈತ ಉತ್ಪಾದಕರ ಕಂಪನಿ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಹಾಸನದ ಕಂದಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸ್ನೇಹ ಸೇವಾ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಿರಿಧಾನ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಣ ಸಂಪಾದನೆಗಿಂತ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ರಸ್ತೆ ಬದಿಯಲ್ಲಿ ಲಭ್ಯವಾಗುವ ತಿಂಡಿ, ತಿನಿಸುಗಳನ್ನು ಸೇವಿಸುವುದರಿಂದ ಆರೋಗ್ಯ ಹದಗೆಡಲಿದೆ. ಬದಲಿಗೆ ಸಿರಿಧಾನ್ಯಗಳನ್ನು ಬಳಕೆ ಮಾಡಿಕೊಂಡು ಮನೆಯಲ್ಲಿಯೇ ಸಿದ್ಧಪಡಿಸಿದ ಆಹಾರ ಸವಿದರೆ ರುಚಿಯ ಜತೆಗೆ ಉತ್ತಮ ಆರೋಗ್ಯ ನಿಮ್ಮದಾಗಲಿದೆ ಎಂದರು.

ಆವರಣದಲ್ಲಿ ತೆರೆದಿದ್ದ ಮಳಿಗೆಗಳಲ್ಲಿ 50ಕ್ಕೂ ಹೆಚ್ಚು ಟೇಬಲ್ ವ್ಯವಸ್ಥೆ ಮಾಡಲಾಗಿತ್ತು. ಸಿರಿಧಾನ್ಯಗಳಿಂದ ತಯಾರಿಸಿರುವ ಅಪ್ಪಳ, ನಿಪ್ಪಟ್ಟು, ಚಕ್ಕುಲಿ, ಕೋಡುಬಳೆ, ಶಾವಿಗೆ, ಚಿಕ್ಕಿನ ಉಂಡೆ, ಹಲ್ವಾ, ಲಡ್ಡು, ರಾಗಿ ಸಿಹಿ ಉಂಡೆ, ಪೊಂಗಲ್ ಹಾಗೂ ರೊಟ್ಟಿ ಸೇರಿದಂತೆ ನೂರಾರು ಬಗೆಯ ತಿನಿಸುಗಳು ಗ್ರಾಹಕರ ಬಾಯಲ್ಲಿ ನೀರೂರಿಸಿದವು.

ಸಾರ್ವಜನಿಕರು ಹಾಗೂ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸಿರಿಧಾನ್ಯಗಳಿಂದ ತಯಾರಿಸಿರುವ ಆಹಾರ ಪದಾರ್ಥಗಳನ್ನು ಸವಿದು ಅವುಗಳ ತಯಾರಿಕೆಗೆ ಬಳಸುವ ಪದಾರ್ಥಗಳು ಹಾಗೂ ವಿಧಾನದ ಬಗ್ಗೆ ಮಾಹಿತಿ ಪಡೆದರು. ಸಂಸ್ಥೆ ವತಿಯಿಂದ ಎಲ್‌ಇಡಿಪಿ ತರಬೇತಿ ಪಡೆದಿದ್ದ 50ಕ್ಕೂ ಹೆಚ್ಚು ಮಹಿಳೆಯರು ಸಿರಿಧಾನ್ಯಗಳ ಪಾಕ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಪ್ರದರ್ಶಿಸಿದರು. ಸ್ವರ್ಧೆಯಲ್ಲಿ ಕೆ.ಎಸ್.ಮಮತಾ(ಪ್ರಥಮ), ಆರ್.ಲೀಲಾವತಿ(ದ್ವಿತೀಯ) ಹಾಗೂ ಎಸ್.ಮಾನಸಾ(ತೃತೀಯ) ಬಹುಮಾನ ಪಡೆದರು.

ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ತಜ್ಞರಾದ ಡಾ.ಶಿವಕುಮಾರ್, ಡಾ.ರಾಜ್ ಶೇಖರ್, ಕೋರಮಂಗಲ ಇಂಟರ್‌ನ್ಯಾಷನಲ್ ಲಿಮಿಟೆಡ್ ಅಧಿಕಾರಿ ಡಾ.ಸಂಕೇತ್, ಸ್ನೇಹ ಸೇವಾ ಸಂಸ್ಥೆ ಅಧ್ಯಕ್ಷ ಎಸ್.ಜಿ.ಚಕ್ರವರ್ತಿ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ನೀಲಿಸಿದ್ದು, ಬಾಹುಬಲಿ ಸಂಘದ ಅಧ್ಯಕ್ಷ ಬಿ.ಎನ್.ರಂಗಪ್ಪ, ಮಲ್ಲಿಕಾರ್ಜುನ್, ಮೋಹನ್, ತೇಜಸ್ವಿನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net