

ಚಿತ್ರದುರ್ಗ: ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ‌್ಯ ಸ್ವಾಮೀಜಿ ಅವರು ಚಿತ್ರದುರ್ಗ ತಾಲೂಕು ಕಾತ್ರಾಳ್ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸುವ ಮೂಲಕ ಭರಮಸಾಗರ ಏತ ನೀರಾವರಿ ಯೋಜನೆ ವ್ಯಾಪ್ತಿಯ 25 ಕೆರೆಗಳ ವೀಕ್ಷಣೆಯ ಮೂರು ದಿನದ ಪ್ರವಾಸವನ್ನು ಆರಂಭಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು, ಕೆರೆಗಳು ತುಂಬಿದರೆ ಸಂಪತ್ತು ತಾನಾಗಿಯೇ ಹರಿದು ಬರುತ್ತದೆ, ಕೃಷಿಗೆ,ಪಶು,ಪಕ್ಷಿ ಹೀಗೆ ಎಲ್ಲ ರಿಗೂ ನೀರು ಬೇಕು. ಹಿಂದೆ ರಾಜಮಹಾರಾಜರು ಕೆರೆಕಟ್ಟೆಗಳ ಮಹತ್ವವನ್ನು ಅರಿತು ಕೆರೆಗಳ ನಿರ್ಮಾಣಕ್ಕೆ ಒತ್ತು ಕೊಟ್ಟಿದ್ದರು. ಭರಮಣ್ಣ ನಾಯಕರು ಕಟ್ಟಿಸಿದ್ದ ಕೆರೆ ಕೂಡ ತುಂಬಿದೆ.
ಕಾತ್ರಾಳ್ ಕೆರೆ ಏರಿ ಅಭಿವೃದ್ಧಿಗೆ 2 ಕೋಟಿ ರೂ.ವೆಚ್ಚದ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದ ಶ್ರೀ ಗಳು,ಭರಮಸಾಗರ ಏತ ನೀರಾವರಿ ಯೋಜನೆ ವ್ಯಾಪ್ತಿಯ 43 ಕೆರೆಗಳ ಇತಿಹಾಸವನ್ನು ಶಾಸ್ತ್ರೀಯವಾಗಿ ದಾಖಲಿಸುವ ಕೆಲಸವಾಗಬೇಕಿದೆ ಎಂದರು. ಈ ವೇಳೆ ಮಾತನಾಡಿದ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಅನುದಾನ ಮಂಜೂರು ಭರವಸೆ ನೀಡಿದರು.
ಬಸ್ತಿಹಳ್ಳಿ ಸುರೇಶ್‌ಬಾಬು,ಕಬ್ಬಿಗೆರೆ ನಾಗರಾಜ್ ಸೇರಿದಂತೆ ನಾನಾ ರೈತ ಮುಖಂಡರು,ಯುವ ಮುಖಂಡ ಜಿ.ಎಂ.ಸಿದ್ದೇಶ್ವರ್,ಯು ವ ಮುಖಂಡ ಜಿ.ಎಸ್.ಅನಿತ್‌ಕುಮಾರ್,ಕೆ.ಸಿ.ನಾಗರಾಜ್,ಕೆರೆಗಳ ವೀಕ್ಷಣೆ ಮಾರ್ಗಸೂಚಿ ಸಂಚಾಲಕ ತೀರ್ಥಪ್ಪ,ಜಿಪಂ ಮಾಜಿ ಸದಸ್ಯ ನರಸಿಂಹರಾಜು,ನಂದಿನಾಗರಾಜ್,ವಿವಿಧ ಗ್ರಾಪಂಗಳ ಸದಸ್ಯರು,ಗ್ರಾಮಸ್ಥರು,ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಮತ್ತಿತರರು ಇದ್ದರು.
ಶ್ರೀಗಳು ಕಾತ್ರಾಳ್ ಬಳಿಕ ಸಾದರಹಳ್ಳಿ,ಚಿಕ್ಕಬೆನ್ನೂರು,ಮಾರಘಟ್ಟ ಮತ್ತಿತರ ಗ್ರಾಮಗಳಿಗೆ ತೆರಳಿದರು. ಗುರುಗಳಿಗೆ ಕೆಲ ಗ್ರಾಮಸ್ಥರು ಭಕ್ತಿ ಸಮರ್ಪಿಸಿದರು.