ಸಿರಿಗನ್ನಡ ಮಳಿಗೆ ಮಾದರಿ ಗ್ರಂಥಾಲಯ

patil sanman
Published on

ಬೀದರ್: ಇಲ್ಲಿನ ಸಿರಿಗನ್ನಡ ಪುಸ್ತಕ ಮಳಿಗೆಯು ಬೀದರ್ ಜಿಲ್ಲೆ ಸಾಹಿತ್ಯಾಸಕ್ತರ ಮಾದರಿ ಗ್ರಂಥಾಲಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಳವಂತರಾವ ಪಾಟೀಲ್ ಹೇಳಿದರು.

ನಗರದ ನೆಹರು ಕ್ರೀಡಾಂಗಣ ಹತ್ತಿರದ ಪುಸ್ತಕ ಮಳಿಗೆಗೆ ಸೋಮವಾರ ಭೇಟಿ ನೀಡಿ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಂಗಮಂದಿರದ ಸಮೀಪ ಮಳಿಗೆ ಇರುವುದರಿಂದ ಸಭೆ, ಸಮಾರಂಭಗಳಿಗೆ ವಿವಿಧೆಡೆಯಿಂದ ಆಗಮಿಸುವ ಸಾಹಿತಿಗಳಿಗೆ ಇದು ಹೆಚ್ಚು ಸಹಕಾರಿಯಾಗಿದೆ ಎಂದರು.

ಮಳಿಗೆಯಲ್ಲಿ ಎಲ್ಲ ರೀತಿಯ ಪುಸ್ತಕ ಸಂಗ್ರಹಿಸಿ ಪ್ರತಿದಿನ ಒಂದೊಂದು ಶಾಲಾ ಮಕ್ಕಳಿಗೆ ಮಳಿಗೆಗೆ ಭೇಟಿ ನೀಡುವಂತೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಪುಸ್ತಕ ಕುರಿತು ಪ್ರೀತಿ, ಅಭಿಮಾನ, ಅಭಿರುಚಿ ಹುಟ್ಟಿ ಓದುವ ಹವ್ಯಾಸ ಬೆಳೆಯುತ್ತದೆ. ಇಲ್ಲಿ ಹಿರಿಯ ಸಾಹಿತಿಗಳ ಭಾವಚಿತ್ರ ಅಳವಡಿಸಬೇಕು, ಕನ್ನಡಕ್ಕೆ ಸಂಬಂಧಪಟ್ಟ ಹಾಡುಗಳನ್ನು ಸಣ್ಣ ಧ್ವನಿಯಲ್ಲಿ ನಿರಂತರ ಕೇಳುವಂತಿರಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ಎಲ್ಲರ ಸಹಾಯ-ಸಹಕಾರದಿಂದ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ, ಜಾನಪದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತಿದೆ. ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಉತ್ತಮ ಸಭಾಂಗಣ ನಿರ್ಮಿಸಲಾಗಿದೆ ಎಂದರು.

ಪ್ರೊ.ಎಸ್.ಬಿ.ಬಿರಾದಾರ, ಡಾ.ರಾಜಕುಮಾರ ಹೆಬ್ಬಾಳೆ, ಎಸ್.ಬಿ.ಕುಚಬಾಳ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಮಹಾರುದ್ರ ಡಾಕುಳಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net