

ಹನೂರು: ಸಮೀಪದ ಸಿರಗೋಡು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪ, ತಳಿರು ತೋರಣ ಹಾಗೂ ವಿದ್ಯುತ್ ದೀಪದಿಂದ ಅಲಂಕರಿಸಲಾಗಿತ್ತು.
ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ದೇಗುಲದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಉತ್ಸವ ಮೂರ್ತಿಯನ್ನು ನೆರೆದಿದ್ದ ಭಕ್ತರೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ತೇರಿಗೆ ಕಳಸವನ್ನು ಅಳವಡಿಸಲಾಯಿತು. ವಿಗ್ರಹ ಮೂರ್ತಿಯನ್ನು ಬಣ್ಣ ಬಣ್ಣದ ಬಟ್ಟೆ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ತೇರಿನಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು.
ಗರುಡವೊಂದು ಪ್ರದಕ್ಷಿಣೆ ಹಾಕಿದ ನಂತರ 11.56ರಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ಸಂದರ್ಭದಲ್ಲಿ ಭಕ್ತರು ಗೋವಿಂದ…,ಗೋವಿಂದಾ ಜಯಘೋಷಗಳನ್ನು ಮೊಳಗಿಸುವುದರ ಮೂಲಕ ಉತ್ಸಾಹದಿಂದ ತೇರನ್ನು ಎಳೆದು ದೇವರ ಕೃಪೆಗೆ ಪಾತ್ರರಾದರು.
ಹಣ್ಣು, ದವನ ಎಸೆತ: ರಥೋತ್ಸವದ ವೇಳೆ ಹರಕೆ ಹೊತ್ತ ಭಕ್ತರು ತೇರಿಗೆ ಹಣ್ಣು ದವನ ಎಸೆದು ಪುನೀತರಾದರೆ, ಕೆಲ ಯುವಕರು ಬಾಳೆಹಣ್ಣಿನ ಮೇಲೆ ಮತ್ತೊಮ್ಮೆ ಹನೂರಿಗೆ ನರೇಂದ್ರ ಗೌಡ್ರು ಎಂದು ಬರೆದು ತೇರಿಗೆ ಎಸೆಯುವುದರ ಮೂಲಕ ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು.
ಶಾಸಕ ಆರ್.ನರೇಂದ್ರ ಪತ್ನಿ ಆಶಾ, ಪುತ್ರ ನವನೀತ್‌ಗೌಡ ರಥೋತ್ಸವದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರು.
ಹನೂರು ಸೇರಿದಂತೆ ಮಂಗಲ, ಚನ್ನಾಲಿಂಗನಹಳ್ಳಿ, ಉದ್ದನೂರು, ಬೆಳತ್ತೂರು, ಲೊಕ್ಕನಹಳ್ಳಿ, ಅಜ್ಜೀಪುರ, ರಾಮಾಪುರ ಹಾಗೂ ಈ ಭಾಗದ ಇನ್ನಿತರ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವದ ಬಳಿಕ ಭಕ್ತರು ಸರತಿ ಸಾಲಿನಲ್ಲಿ ದೇಗುಲಕ್ಕೆ ತೆರಳಿ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ದೇವಸ್ಥಾನದ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು. ಮಜ್ಜಿಗೆ, ಪಾನಕ ಅಲ್ಲಲ್ಲಿ ವಿತರಿಸಲಾಗಿತ್ತು. ಹನೂರು ಪೊಲೀಸ್ ಠಾಣೆಯ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.