ಸಿಮ್ಸ್‌ನಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಿ

11rajesh2
Published on

ಚಾಮರಾಜನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟಿನ್ ಅನ್ನು ಚಾಮರಾಜನಗರ ವೈದ್ಯಕೀಯ ಸಂಶೋಧನಾ ಕಾಲೇಜು ಹಾಗೂ ಬೋಧನಾ ಆಸ್ಪತ್ರೆಯ ಸಮೀಪ ತೆರೆಯಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಗೆ ನಿತ್ಯವೂ ಸಾವಿರಾರು ರೋಗಿಗಳು ಹಾಗೂ ಸಂಬಂಧಿಕರು ಭೇಟಿ ನೀಡುತ್ತಾರೆ. ವಿವಿಧ ಬಗೆಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ಬರುವ ಹೊರ ರೋಗಿಗಳು, ಸಾರ್ವಜನಿಕರು ಹಾಗೂ ಸಿಮ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯ ವೇಳೆಯಲ್ಲಿ ತಿಂಡಿ-ಊಟಕ್ಕಾಗಿ ಸಮಸ್ಯೆ ಅನುಭವಿಸುವಂತಾಗಿದೆ. ಆಸ್ಪತ್ರೆಯ ಸಮೀಪದಲ್ಲೇ ಇರುವ ಬೆರಳೆಣಿಕೆ ಹೋಟೆಲ್‌ಗಳನ್ನು ಅವಲಂಬಿಸುವಂತಾಗಿದೆ. ಆದರೆ ಸರ್ಕಾರಿ ಆಸ್ಪತ್ರೆಗೆ ಬರುವವರು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ಬಡ ಮತ್ತು ಮಧ್ಯಮ ವರ್ಗದವರಾಗಿದ್ದು, ಹೆಚ್ಚು ಹಣವನ್ನು ಪಾವತಿಸಿ ಹೊರಗಡೆ ಹೋಟೆಲ್‌ಗಳಲ್ಲಿ ಊಟ ಮಾಡುವುದು ದುಬಾರಿ ಎನಿಸುತ್ತಿದೆ.

ಆಗಾಗಿ ಕೇವಲ 10 ರೂ, ಗಳಲ್ಲಿ ತಿಂಡಿ, ಊಟ ದಿರೆಯುವ ಇಂದಿರಾ ಕ್ಯಾಂಟಿನ್ ಅನ್ನು ಸಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈಗಾಗಾಲೇ ಜಿಲ್ಲಾಡಳಿತ ಭವನದ ಸಮೀಪ ಇಂದಿರಾ ಕ್ಯಾಂಟಿನ್ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಮತ್ತೊಂದು ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡುವ ಚರ್ಚೆಗಳು ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಿಮ್ಸ್ ಆಸ್ಪತ್ರೆಯ ಬಳಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಬೇಕು. ಈ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

4-5 ಸಾವಿರ ಜನರು ಭೇಟಿ:

ನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಗೆ ನಿತ್ಯವೂ ಸುಮಾರು 4-5 ಸಾವಿರ ಜನರು ಭೇಟಿ ನೀಡುತ್ತಾರೆ. ಹೊರರೋಗಿಗಳು, ನಿತ್ಯವೂ ತಪಾಸಣೆಗೆ ಬರುವವರು, ತುರ್ತು ಚಿಕಿತ್ಸೆಗಳಿಗೆ ಭೇಟಿ ನೀಡುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಇನ್ನಿತರೆ ಕೆಲಸಗಳಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುತ್ತಾರೆ. ಅವರಿಗೆ ಇಂದಿರಾ ಕ್ಯಾಂಟಿನ್ ಪ್ರಾರಂಭವಾದರೇ ಅನುಕೂಲವಾಗಲಿದೆ. ಅದಲ್ಲದೇ ಸಿಮ್ಸ್ ಆಸ್ಪತ್ರೆ ಸಮೀಪದಲ್ಲೇ ಆಟೋ ನಿಲ್ದಾಣವಿದ್ದು, ಆಟೋ ಚಾಲಕರು ಹಾಗೂ ಈ ಭಾಗದಲ್ಲಿ ವಿವಿಧ ಕೆಲಸ ಕಾರ್ಯಗಳಿಗೆ ಬರುವ ಕೂಲಿ ಕಾರ್ಮಿಕರಿಗೂ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಅನುಕೂಲವಾಗುವಂತೆ ಸಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಜಿಲ್ಲೆಯಲ್ಲಿ 5 ಇಂದಿರಾ ಕ್ಯಾಂಟಿನ್:

ಚಾಮರಾಜನಗರದ ಜಿಲ್ಲಾಡಳಿತ ಭವನದ ಸಮೀಪ ಮತ್ತು ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕು ಕೇಂದ್ರಗಳಲ್ಲಿ ಹಲವಾರು ವರ್ಷಗಳಿಂದ ಇಂದಿರಾ ಕ್ಯಾಂಟಿನ್ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಹನೂರು ತಾಲೂಕು ಕೇಂದ್ರದಲ್ಲೂ ಹೊಸದಾಗಿ ಇಂದಿರಾ ಕ್ಯಾಂಟಿನ್ ಪ್ರಾರಂಭವಾಗಿದೆ. ಕ್ಯಾಂಟಿನ್ ನಡೆಸುವ ಗುತ್ತಿಗೆದಾರರಿಗೆ ಸೂಕ್ತ ಸಮಯಕ್ಕೆ ಬಿಲ್ ಆಗುವುದಿಲ್ಲ ಎನ್ನುವುದು ಹಾಗೂ ಇನ್ನಿತರೆ ತಾಂತ್ರಿಕ ಸಮಸ್ಯೆಗಳು ಇದ್ದಾಗ ಕ್ಯಾಂಟಿನ್ ಮುಚ್ಚಿರುವುದನ್ನು ಹೊರತುಪಡಿಸಿ ಬಡವರ ಪಾಲಿಗೆ ಆಧಾರವಾಗಿದೆ. ಇತ್ತೀಚೆಗೆ ಹನೂರಿನಲ್ಲಿ ಪ್ರಾರಂಭವಾದ ಇಂದಿರಾ ಕ್ಯಾಂಟಿನ್‌ಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯ ವೇಳೆಯಲ್ಲೂ ಜನರು ಬರುತ್ತಿದ್ದಾರೆ. ಸರತಿಯಲ್ಲಿ ನಿಂತು ಟೋಕನ್ ಪಡೆದು ಊಟ ಮಾಡುವ ದೃಶ್ಯಗಳು ಸಾಮಾನ್ಯವಾಗಿದೆ. ದಿನಂಪ್ರತಿ ಒಂದು ಕ್ಯಾಂಟಿನ್‌ನಲ್ಲಿ ಸಾರಾಸರಿ 500 ಜನರು ಊಟ ಮಾಡುತ್ತಾರೆ ಎಂದು ಹೇಳಲಾಗುತ್ತಿದ್ದು, ಸಿಮ್ಸ್ ಆಸ್ಪತ್ರೆಯ ಸಮೀಪ ಇಂದಿಗಾ ಕ್ಯಾಂಟಿನ್ ಪ್ರಾರಂಭಿಸಿದರೆ ಮತ್ತಷ್ಟು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ.

ನೌಕರರಿಗೂ ಕ್ಯಾಂಟಿನ್:

ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಂಜಿನಿಯರಿಂಗ್ ವಿಭಾಗಕ್ಕೆ ಕ್ಯಾಂಟಿನ್ ನೀಡಲಾಗಿದೆ. ಸಿಮ್ಸ್ ಆಸ್ಪತ್ರೆ ಮುಂಭಾಗದ ಆವರಣದಲ್ಲಿ ಸಿಮ್ಸ್ ವಿದ್ಯಾರ್ಥಿಗಳು, ವೈದ್ಯರು, ರೋಗಿಗಳು ಹಾಗೂ ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಯಾಂಟಿನ್ ನಿರ್ಮಾಣಗೊಳ್ಳಲಿದೆ. ಈ ಯೋಜನೆ ಅಂದಾಜು 45 ಲಕ್ಷ ರೂ, ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಈಗಾಗಲೇ ಅಡಿಗಲ್ಲನ್ನು ಹಾಕಲಾಗಿದೆ. ಸಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ನಾವು ಸಹ ಮನವಿ ಮಾಡಿದ್ದು, ಮೂದಿನ ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್ ವಿಜಯವಾಣಿಗೆ ಮಾಹಿತಿ ನೀಡಿದರು.

ನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯ ಸಮೀಪ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡುವ ಸಂಬಂಧ ಈಗಾಗಲೇ ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಕ್ಯಾಂಟಿನ್ ನಿರ್ಮಾಣವಾಗಲಿದೆ ಎಂಬ ಭರವಸೆ ಇದೆ.

-ಡಾ.ಮಂಜುನಾಥ್, ಡೀನ್ ಮತ್ತು ನಿರ್ದೇಶನ, ಸಿಮ್ಸ್, ಚಾಮರಾಜನಗರ

ಸಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ. ಇಲ್ಲಿಗೆ ಭೇಟಿ ನೀಡುವವರು ಊಟ, ತಿಂಡಿ ಮಾಡಲು ಸಮಸ್ಯೆ ಅನುಭವಿಸುವುದನ್ನು ಸಾಕಷ್ಟು ಬಾರಿ ಕಂಡಿದ್ದೇನೆ. ಸಾರ್ವಜನಿಕರು ಮತ್ತು ಹೊರರೋಗಿಗಳ ಅನುಕೂಲವಾಗುವ ನಿಟ್ಟಿನಲ್ಲಿ ಆದಷ್ಟು ಬೇಗ ಇಂದಿರಾ ಕ್ಯಾಂಟಿನ್ ನಿರ್ಮಾಣವಾಗಬೇಕಿದೆ.

-ಆನಂದ್ ಭಗೀರಥ, ಯುವ ಮುಖಂಡ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net