

ಸಕಲೇಶಪುರ: ಕಾಫಿ ಬೆಳೆಗಾರರ ಒತ್ತುವರಿ ಜಮೀನನ್ನು ಗುತ್ತಿಗೆ ನೀಡುವ ಯೋಜನೆಯನ್ನು ಜಾರಿಗೊಳಿಸಿದ ಭಾರತೀಯ ಜನತಾ ಪಾರ್ಟಿಯನ್ನು ಮತ್ತೊಮ್ಮೆ ಗದ್ದುಗೆಗೆ ತರಲು ತಾಲೂಕಿನ ಕಾಫಿ ಬೆಳೆಗಾರರು ಒಂದಾಗಬೇಕು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ತಾಲೂಕಿನ ವಳಲಹಳ್ಳಿ, ಹೆತ್ತೂರು, ವನಗೂರು ಕೂಡಿಗೆ ಹಾಗೂ ಅಂಗಡಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಪಕ್ಷದ ಅಭ್ಯರ್ಥಿ ಸಿಮೆಂಟ್ ಮಂಜು ಪರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು.
2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಭೂಕಬಳಿಕೆ ನಿಯಮ ಜಾರಿಗೊಳಿಸಿದ ಫಲವಾಗಿ ಸಾಕಷ್ಟು ಕಾಫಿ ಬೆಳೆಗಾರರು ಒತ್ತುವರಿ ಭೂಮಿಯಲ್ಲಿ ಬೆಳೆದಿದ್ದ ಕಾಫಿ ತೋಟಗಳನ್ನು ಭೂ ಕಬಳಿಕೆ ಕಾಯ್ದೆಯಿಂದ ಕಳೆದುಕೊಳ್ಳುವಂತ ಸ್ಥಿತಿ ನಿರ್ಮಾಣವಾಯಿತು. ಇಂದಿಗೂ ಚಿಕ್ಕಮಗಳೂರು-ಕೊಡಗು-ಸಕಲೇಶಪುರ ತಾಲೂಕಿನ ಸಾಕಷ್ಟು ಬೆಳೆಗಾರರು ದುಗಡದಲ್ಲೇ ದಿನ ಕಳೆಯುತ್ತಿದ್ದಾರೆ. ಮತ್ತೊಮ್ಮೆ ಜೆಡಿಎಸ್ ಸರ್ಕಾರ ಬಂದರೆ ಮತ್ತೆ ಭೂಕಬಳಿಕೆ ನಿಯಮ ಜಾರಿಗೊಳಿಸುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಒತ್ತುವರಿ ಜಮೀನು ಗುತ್ತಿಗೆ ನೀಡುವ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಾದರೆ ಬೆಳೆಗಾರರು ಬಿಜೆಪಿ ಬೆಂಬಲಿಸುವುದು ಅನಿವಾರ್ಯ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುತ್ತಿರುವುದು ಬಿಜೆಪಿ ಮಾತ್ರ. ಸ್ಥಳೀಯ ಶಾಸಕರಿಗೆ ಅಭಿವೃದ್ಧಿ ಮುನ್ನೋಟವೇ ತಿಳಿಯದಾಗಿದ್ದು, ಹಾಯುವುದಿಲ್ಲ, ಒದೆಯುವುದಿಲ್ಲ ಎಂಬ ಕಾರಣಕ್ಕೆ ಆರು ಬಾರಿ ಶಾಸಕರಾಗಿದ್ದಾರೆ. ಆದರೆ ಹಾಲು ಕೊಡದ ಹಸುವಿನಿಂದ ಏನು ಉಪಯೋಗ? ಸಗಣಿ ಹಾಕಿದರೆ ಅದನ್ನು ಹೊಳೆನರಸೀಪುರದ ಮುಖಂಡರು ಎತ್ತಿಕೊಂಡು ಹೋಗುತ್ತಾರೆ. ಶಾಸಕರಿಗೂ ವಯಸ್ಸಾಗಿದ್ದು ವಿಶ್ರಾಂತಿಯ ಅಗತ್ಯವಿದೆ ಎಂದು ಕುಟುಕಿದರು.
ಜೆಡಿಎಸ್ ರಮ್ಮಿ ಆಟದಲ್ಲಿನ ಜೋಕರ್ ಇದ್ದಂತೆ. ಚಿಕ್ಕಮಗಳೂರಿನಲ್ಲಿ ಪಕ್ಷದ ವಿಧಾನಪರಿಷತ್ ಸದಸ್ಯ ಭೋಜೆಗೌಡ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚಿಸುತ್ತಾರೆ. ಆದ್ದರಿಂದ, ಜೆಡಿಎಸ್ ನಿಲುವು ಏನು ಎಂಬದನ್ನು ಎಚ್.ಡಿ.ಕುಮಾರಸ್ವಾಮಿ ಸ್ವಷ್ಟಪಡಿಸಬೇಕು ಎಂದರು.
ಚಿಕ್ಕಮಗಳೂರಿನಲ್ಲಿರುವ ಸಮಸ್ಯೆಗಳೇ ಸಕಲೇಶಪುರದಲ್ಲೂ ಇದ್ದು ಮಲೆನಾಡಿನ ನೈಜ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಆದರೆ, ಶಾಸಕರಿಂದ ಅಂತಹ ಪ್ರಯತ್ನಗಳು ನಡೆಯುತ್ತಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಉತ್ತರಪ್ರದೇಶದಂತೆ ಇಲ್ಲೂ ಆಡಳಿತ ನಡೆಸಬೇಕಾದರೆ ಸಂಪೂರ್ಣ ಬಹುಮತದ ಅಗತ್ಯವಿದೆ ಎಂದರು.
ಪಕ್ಷದ ಅಭ್ಯರ್ಥಿ ಸೀಮೆಂಟ್ ಮಂಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.