

ಸಕಲೇಶಪುರ: ಭಾರತೀಯ ಜನತಾಪಕ್ಷದ ಅಭ್ಯರ್ಥಿಯಾಗಿ ಸಿಮೆಂಟ್ ಮಂಜು ಗುರುವಾರ ನಾಮಪತ್ರ ಸಲ್ಲಿಸಿದರು.
ಶಾಸಕ ಪ್ರೀತಂ ಜೆ. ಗೌಡ, ಮಾಜಿ ಶಾಸಕರಾದ ಬಿ.ಆರ್ ಗುರುದೇವ್, ಎಚ್.ಎಂ ವಿಶ್ವನಾಥ್ ಸಮ್ಮುಖದಲ್ಲಿ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಹಳೇ ಬಸ್ ನಿಲ್ದಾಣದವರೆಗೆ ಮೆರವಣಿಗೆಯಲ್ಲಿ ತೆರಳಿ ಹಳೇ ಬಸ್ ನಿಲ್ದಾಣ ಸಮೀಪ ಬಹಿರಂಗ ಸಭೆ ನಡೆಸಲಾಯಿತು.
ಸಭೆಯಲ್ಲಿ ಶಾಸಕ ಪ್ರೀತಂ ಜೆ ಗೌಡ ಮಾತನಾಡಿ, ಶಾಸಕ ಎಚ್.ಕೆ ಕುಮಾರಸ್ವಾಮಿ ಆಯ್ಕೆಯಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. 15 ವರ್ಷಗಳ ಹಿಂದಿನ ಸಕಲೇಶಪುರಕ್ಕೂ ಇಂದಿನ ಸ್ಥಿತಿಗೂ ವ್ಯತ್ಯಾಸವೇ ಇಲ್ಲದಾಗಿದೆ. ಅಭಿವೃದ್ಧಿ ಕಲ್ಪನೆ ರಹಿತ ಶಾಸಕರಿಗೆ ಇದು ಕೊನೇ ಚುನಾವಣೆಯಾಗಿದ್ದು, ಈ ಬಾರಿ ಸೋತರೆ ಮನೆ ಸೇರುವುದು ನಿಶ್ಚಿತ. ಈ ಬಾರಿ ಎಚ್.ಕೆ ಕುಮಾರಸ್ವಾಮಿ ಅವರನ್ನು ಸೋಲಿಸುವ ಕೆಲಸವಾಗಲೇಬೇಕು ಎಂದರು. ಇದಕ್ಕಾಗಿ ಒಮ್ಮೆ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬಹುದು ಎಂದರು.
ಮಾಜಿ ಶಾಸಕ ಬಿ.ಆರ್ ಗುರುದೇವ್ ಮಾತನಾಡಿ, ಎರಡು ದಶಕಗಳಿಂದ ಕ್ಷೇತ್ರಕ್ಕೆ ಯಾವುದೇ ವಿಶೇಷ ಅನುದಾನ ತರದ ಶಾಸಕರನ್ನು ಈ ಬಾರಿ ಮನೆಗೆ ಕಳುಹಿಸುವ ಕೆಲಸವನ್ನು ಕ್ಷೇತ್ರದ ಜನತೆ ಮಾಡಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮಾತನಾಡಿ, ಹೊಳೆನರಸಿಪುರದ ಏಜೆಂಟರಾಗಿ ಕೆಲಸ ಮಾಡುವ ಶಾಸಕ ಎಚ್.ಕೆ ಕುಮಾರಸ್ವಾಮಿ ಕ್ಷೇತ್ರವನ್ನು ಸಮಸ್ಯೆಗಳಾಗಿ ಪರಿವರ್ತಿಸಿದ್ದಾರೆ. ಈ ಬಾರಿ ಕ್ಷೇತ್ರದ ಜನರು ಬಿಜೆಪಿಗೆ ಮತನೀಡುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕರಿಸಬೇಕು ಎಂದರು.
ಅಭ್ಯರ್ಥಿ ಸಿಮೆಂಟ್ ಮಂಜು ಮಾತನಾಡಿ, ಬಿಜೆಪಿ ವರಿಷ್ಠರು ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ್ದು ಕ್ಷೇತ್ರದ ಜನರು ನನ್ನ ಕೈಹಿಡಿದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಅವರಿಗೆ ನಾಮಪತ್ರ ಸಲ್ಲಿಸಿದರು.