ಸಿಬ್ಬಂದಿಗೆ ಮೇಯರ್ ತರಾಟೆ

13
Published on

ಮೈಸೂರು: ಸಾರ್ವಜನಿಕರ ಕೆಲಸ ಕಾರ್ಯ ವಿಳಂಬವಾಗುತ್ತಿದೆಂಬ ದೂರಿನ ಹಿನ್ನೆಲೆಯಲ್ಲಿ ಮೇಯರ್ ಶಿವಕುಮಾರ್ ಪಾಲಿಕೆಯ ವಲಯ 1ರ ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಖಾತೆ ಮಾಡಿಕೊಡಲು ವಿಳಂಬ ಮಾಡುತ್ತಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.


ಒಂದು ತಿಂಗಳಾದರೂ ಖಾತೆ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿ ಅರ್ಜಿದಾರರು ಪಾಲಿಕೆ ಮುಖ್ಯಕಚೇರಿಗೆ ಮನವಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಾಪೌರರು, ಇಲ್ಲಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲನ್ನು ಆಲಿಸಿದರು.


ಈ ವೇಳೆ ಖಾತೆ ಬದಲಾವಣೆ, ಖಾತೆ ಮಾಡಿಕೊಡುವ ಹಲವಾರು ಅರ್ಜಿಗಳು, ಕಡತಗಳು ಟೇಬಲ್‌ನಲ್ಲಿ ಇಟ್ಟುಕೊಂಡಿದ್ದನ್ನು ಗಮನಿಸಿ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.
ಖಾತೆಗೆ ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ವಿಲೇವಾರಿ ಮಾಡಬೇಕು. ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ಹಿಂಬರಹ ಕೊಟ್ಟು ಕಳುಹಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ವಿಳಂಬ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.


ಪಾಲಿಕೆ ಕಂದಾಯ ನಿರೀಕ್ಷಕರು ನಿತ್ಯ 25 ಮನೆಗಳಿಗೆ ತೆರಳಿ ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಆಲಿಸಿ ಸೆಲ್ಛಿ ಪೋಟೋ ಕ್ಲಿಕ್ಕಿಸಿಕೊಂಡು ವಲಯ ಆಯುಕ್ತರಿಗೆ ಕಳುಹಿಸಬೇಕು. ಅದನ್ನು ಅವರು ಸಂಗ್ರಹಿಸಿ ಪರಿಶೀಲನೆ ಮಾಡಬೇಕು. ಯಾವ ದಿನ ಯಾವ ಸ್ಥಳಕ್ಕೆ ಭೇಟಿ ನೀಡಿರುವ ಕುರಿತು ಕಂಪ್ಯೂಟರ್‌ನಲ್ಲಿ ದಾಖಲು ಮಾಡಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net