

ಕಲಬುರಗಿ: ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಎಂದು ವಿಧಾನಸಭೆ ಪ್ರತಿಪಕ್ಷ ಮುಖ್ಯ ಸಚೇತಕ ಡಾ.ಅಜಯಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
ಜೇವರ್ಗಿ ಇತರೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಲು ಸೋಮವಾರ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿ, ಚುನಾವಣೆಗೆ 28 ದಿನಗಳಿರುವಾಗ ದಾಳಿ ನಡೆಸಿದ್ದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.
ಈ ಹಿಂದೆ ದಾಳಿ ನಡೆದಾಗ ಡಿಕೆಶಿ ಸಂಪೂರ್ಣ ಸಹಕಾರ ನೀಡಿದ್ದರು. ಹೀಗಿರುವಾಗ ಮತ್ತೊಂದು ದಾಳಿ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ ಸೋಲುವ ಭೀತಿಯಿಂದ ಕೆಪಿಪಿಸಿ ಅಧ್ಯಕ್ಷರ ಮನೆ ಮೇಲೆ ದಾಳಿ ಮಾಡಿಸಿರುವಂತಿದೆ. ಬಿಜೆಪಿಯವರು ಸ್ವತಂತ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರದ ವಿರುದ್ಧ ಮಾತನಾಡುವ ಪ್ರತಿಪಕ್ಷದವರ ಮೇಲೆ ಐಟಿ, ಇಡಿ, ಸಿಬಿಐ ದಾಳಿ ನಡೆಸಲಾಗುತ್ತಿದೆ. ರಾಜಸ್ಥಾನದ ರಾಜಕೀಯ ಬಿಕ್ಕುಟ್ಟು ಸಂದರ್ಭದಲ್ಲಿ ಅಶೋಕ್ ಗೆಹ್ಲೋಟ್ ಅಣ್ಣನ ಮನೆ ಮೇಲೆ ದಾಳಿ ನಡೆದಿತ್ತು. ಎರಡು ವರ್ಷಗಳಿಂದ ಬಿಜೆಪಿಯವರು ಇದೇ ತೆರನಾಗಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ಮುಖಂಡರಾದ ಕಾಶೀರಾಯಗೌಡ ಯಲಗೋಡ, ಮಲ್ಲಿಕಾಜರ್ುನ ಹಲಕರ್ಟಿ , ವಿಜಯಕುಮಾರ ಪಾಟೀಲ್ ಹಂಗರಗಿ, ಬಸವರಾಜ ಬಿರಾದಾರ ಸೊನ್ನ,ಮಲ್ಹಾರಾವ ಕುಲಕರ್ಣಿ, ಶಿವಲಿಂಗ ಸುಂಕದ ಇತರರಿದ್ದರು.