ಸಿಬಿಐ, ಇಡಿ, ಐಟಿಗಳೇ ಬಿಜೆಪಿ ಸ್ಟಾರ್ ಕ್ಯಾಂಪೇರ‍್ಸ್

Priyank Kharge
Published on

ಕಲಬುರಗಿ: ಸಿಬಿಐ, ಐಟಿ, ಇಡಿಗಳೇ ಬಿಜೆಪಿ ಸ್ಟಾರ್ ಕ್ಯಾಂಪೇನರ್‌ಗಳಂತೆ ಕೆಲಸ ಮಾಡುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ಈ ಮೂರ್ನಾಲ್ಕು ಕ್ಯಾಂಪೇನರ್‌ಗಳನ್ನು ಬಿಟ್ಟು ಗೆದ್ದು ತೋರಿಸಲಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕುಟುಕಿದ ಅವರು, ಬಿಜೆಪಿ ಬಳಿ ವಾಷಿಂಗ್ ಮಷಿನ್ ಇದೆ. ಬೇರೆ ಪಕ್ಷದಲ್ಲಿ ಭ್ರಷ್ಟರಿದ್ದವರು ಬಿಜೆಪಿ (ವಾಷಿಂಗ್ ಮಷಿನ್) ಸೇರಿದ ತಕ್ಷಣ ಸ್ವಚ್ಛರಾಗುತ್ತಾರೆ. ಆ ರೀತಿಯ ಯಂತ್ರ ಆ ಪಕ್ಷದವರಲ್ಲಿದೆ ಎಂದು ಕುಹಕವಾಡಿದರು.

ಜಗದೀಶ ಶೆಟ್ಟರ್ ಸೇರಿ ಕೆಲವರಿಗೆ ಗಾಳ ಹಾಕಲು ಪ್ರಯತ್ನಿಸುತ್ತಿರುವ ರಾಜ್ಯದ ಬಿಜೆಪಿ ನಾಯಕರ ಮೇಲೆ ವರಿಷ್ಠರಿಗೆ ಭರವಸೆ ಉಳಿದಿಲ್ಲ. ವಿಜಯೇಂದ್ರ, ಅಶೋಕ್ ನಾಯಕತ್ವದಿಂದ ಲೋಕಸಭೆ ಚುನಾವಣೆ ಗೆಲ್ಲಲಾಗಲ್ಲ ಎಂಬುದು ಮನವರಿಕೆ ಆದಂತಿದೆ ಎಂದು ಛೇಡಿಸಿದರು.

೧೩೮ ವರ್ಷ ಇತಿಹಾಸವಿರುವ ಕಾಂಗ್ರೆಸ್‌ಗೆ ಯಾರೇ ಬಂದು ಹೋದರೂ ಫರಕ್ ಬೀಳಲ್ಲ. ಒಳ್ಳೆಯ ವ್ಯಕ್ತಿ ಎಂದು ಶೆಟ್ಟರ್ ಅವರಿಗೆ ಅವಕಾಶ ನೀಡಿದ್ದೆವು. ತಿರಸ್ಕರಿಸಿದ್ದರೆ ನಾವೇನು ಮಾಡಕ್ಕಾಗಲ್ಲ. ಮೋದಿ ಅವರಿಗೆ ಕರ್ನಾಟಕದಲ್ಲಿ ಅನಿವಾರ್ಯವೇನಿದೆ? ಸೋತವರನ್ನು ಕರೆದೊಯ್ದು ಅವರ ಕೈಬಲಪಡಿಸಬೇಕಾ?. ಇದು ಸ್ಥಳಿಯ ಬಿಜೆಪಿ ನಾಯಕತ್ವದ ಕೊರತೆಗೆ ಸಾಕ್ಷಿ ಎಂದರು.

ಆರೇ ತಿಂಗಳಲ್ಲಿ ಬಂದವರು ನಮ್ಮ ಪಕ್ಷದ ಆಸ್ತಿಯಲ್ಲ. ಪಕ್ಷವನ್ನು ಕಟ್ಟಿದ್ದು ಲಕ್ಷಾಂತರ ಕಾರ್ಯಕರ್ತರು ವಿನಃ ಶೆಟ್ಟರ್, ಪ್ರಿಯಾಂಕ್‌ನಂತಹ ನಾಯಕರಲ್ಲ. ಅಶೋಕ್, ವಿಜಯೇಂದ್ರ ಅವರಿಂದ ಮೋದಿ ಕೈ ಬಲವರ್ಧನೆಯಾಗಲ್ಲ ಎಂದು ಬಿಎಸ್‌ವೈ ಬೆನ್ನು ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net