ಸಿಪೆಟ್ ಗೆ ಅನುದಾನ ಬಿಡುಗಡೆಗೊಳಿಸಿ

Khuba Memo
Published on

ಬೀದರ್: ಔರಾದ್ ತಾಲೂಕಿನ ಬಲ್ಲೂರ(ಜೆ) ಬಳಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಸಿಪೆಟ್) ಕಟ್ಟಡ ಕಾಮಗಾರಿ ಸಂಬಂಧ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಬೆಂಗಳೂರಿನಲ್ಲಿ ಬೃಹತ್ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾದರು.
ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳಿಲ್ಲ. ನಿರುದ್ಯೋಗ ಸಮಸ್ಯೆ ದೂರ ಮಾಡಲು ಕೇಂದ್ರ ಸರ್ಕಾರ ಗಡಿ ಜಿಲ್ಲೆ ಬೀದರ್ ಗೆ ಸಿಪೆಟ್ ಮಂಜೂರು ಮಾಡಿ ತನ್ನ ಪಾಲಿನ ಶೇ.50 ಅನುದಾನ ಬಿಡುಗಡೆಗೊಳಿಸಿದೆ. ಜಿಲ್ಲಾಡಳಿತ ಕಟ್ಟಡಕ್ಕಾಗಿ ಬಲ್ಲೂರ(ಜೆ) ಹತ್ತಿರ 10 ಎಕರೆ ಜಮೀನು ಮಂಜೂರು ಮಾಡಿದೆ. ಕಳೆದ ವರ್ಷ ಭೂಮಿಪೂಜೆಯೂ ಆಗಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಶೇ.50 ಅನುದಾನ ಬಿಡುಗಡೆಗೊಳಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಬೀದರ್ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳಿಲ್ಲದ ಕಾರಣ ಯುವಕರು ತೆಲಂಗಾಣ ಹಾಗೂ ಮಹಾರಾಷ್ಟ್ರದತ್ತ ಮುಖ ಮಾಡುತ್ತಿದ್ದಾರೆ. ಕೈಗಾರಿಕೋದ್ಯಮಕ್ಕೆ ಅಗತ್ಯವಿರುವ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ವಿಮಾನಯಾನ ಇತ್ಯಾದಿ ಮೂಲಸೌಕರ್ಯ ಕೇಂದ್ರದ ಅನುದಾನದಡಿ ಕಲ್ಪಿಸಲಾಗಿದೆ. ಹಿಂದಿನ ಸರ್ಕಾರದಲ್ಲಿ ಇನ್ವೆಸ್ಟ್ ಕರ್ನಾಟಕ ಬೆಂಗಳೂರು, ಹುಬ್ಬಳ್ಳಿ ಹಾಗೂ ಹೈದರಾಬಾದ್ ನಲ್ಲಿ ನಡೆದ ಬಂಡವಾಳ ಹೂಡಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವೆ. ಬೀದರ್ ಜಿಲ್ಲೆಯಲ್ಲಿ ಹೂಡಿಕೆಗೆ ಕೆಲ ಕಂಪನಿಗಳು ಮುಂದೆ ಬಂದಿದ್ದವು. ಒಪ್ಪಂದ ಸಹ ಆಗಿತ್ತು. ಕರೊನಾದಿಂದಾಗಿ ಎಲ್ಲ ಪ್ರಕ್ರಿಯೆ ನಿಂತುಹೋಗಿದೆ. ಆ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡಬೇಕು ಎಂದು ಕೋರಿದರು. ಎಲ್ಲ ಬೇಡಿಕೆಗಳಿಗೆ ಸಚಿವ ಪಾಟೀಲ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಖೂಬಾ ತಿಳಿಸಿದ್ದಾರೆ.
ಶಾಸಕರಾದ ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದು ಪಾಟೀಲ್, ಎನ್ನೆಸ್ಸೆಸ್ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಜಿಪಂ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ್, ಬಸವರಾಜ ಆರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net