ಸಿನಿಮೀಯ ರೀತಿಯಲ್ಲಿ ಕಾರು ಅಪಹರಿಸಿದ್ದವರ ವಿಚಾರಣೆ

ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸರು ಅಪಹರಣ ಪ್ರಕರಣದ ಎಂಟು ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು.
21-GPT-1A
Published on

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಗ್ರಾಮದಲ್ಲಿ ಆ.11ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಕಾರನ್ನು ಅಪಹರಿಸಿದ್ದ ಪ್ರಕರಣದಲ್ಲಿ ಅದೇ ದಿನ ಬಂಧಿಸಿದ್ದ ಎಂಟು ಆರೋಪಿಗಳನ್ನು ಪೊಲೀಸರು ಸೋಮವಾರ ಮರು ವಿಚಾರಣೆ ನಡೆಸಿದರು.


ಬಂಧಿತ ಆರೋಪಿಗಳಾದ ಪ್ರೇಮ್, ಅಲ್ವಿನ್, ಅಭಿಮನ್ಯು, ಮಹಮದ್ ಜಸಿಲ್, ಅಜಯ್, ಸುರೇಶ್, ದಿನೇಶ್ ಹಾಗೂ ಅಶ್ವನ್ ದೇವ್ ಎಂಟು ಆರೋಪಿಗಳನ್ನು ಬಂಧಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಜಿಲ್ಲಾ ಕಾರಾಗೃಹದಲ್ಲಿದ್ದ ಎಲ್ಲ ಆರೋಪಿಗಳನ್ನು ಬಾಡಿ ವಾರಂಟ್ ಸಮೇತ ವಶಕ್ಕೆ ಪಡೆದು ಎರಡು ದಿನ ವಿಚಾರಣೆ ನಡೆಸಿದ್ದು ಕೆಲವು ಮಾಹಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಆ.11ರಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಇಟಿಯೋಸ್ ಹಾಗೂ ಇನ್ನೊವಾ ಕಾರುಗಳಲ್ಲಿ ಹೆಲ್ಮೆಟ್ ಧರಿಸಿ ಆಗಮಿಸಿದ ದುಷ್ಕರ್ಮಿಗಳು ಬೇಗೂರಿನಲ್ಲಿ ಇನ್ನೊವಾ ಕಾರನ್ನು ಅಡ್ಡಗಟ್ಟಿ ಚಾಲಕ ಹಾಗೂ ಚಿನ್ನದ ವ್ಯಾಪಾರಿ ಸುಖದೇವ್ ಎಂಬುವರನ್ನು ಹೊರಹಾಕಿ ಕಾರನ್ನು ಅಪಹರಿಸಿದ್ದರು. ದರೋಡೆಕೋರರನ್ನು ಬೆನ್ನತ್ತಿದ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸೋಮಹಳ್ಳಿ ಗ್ರಾಮದಲ್ಲಿ ಒಂದು ಕಾರು ಅಪಘಾತವಾಗಿದ್ದರಿಂದ ಐವರು ದುಷ್ಕರ್ಮಿಗಳು ಸಿಕ್ಕಿಬಿದ್ದರೆ, ಪುಣಜನೂರು ಚೆಕ್‌ಪೋಸ್ಟ್‌ನಲ್ಲಿ ಮತ್ತೊಂದು ಕಾರಿನೊಂದಿಗೆ ಮೂವರು ದುಷ್ಕರ್ಮಿಗಳನ್ನು ಸೆರೆ ಹಿಡಿಯಲಾಗಿತ್ತು. ಆದರೆ ಅಪಹರಿಸಿದ್ದ ಕಾರನ್ನು ಚಾಮರಾಜನಗರ ತಾಲೂಕಿನ ಶಿವಪುರ ಸಮೀಪ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪ್ರಕರಣದ ಪ್ರಮುಖ ಆರೋಪಿಗಳು ಪರಾರಿಯಾಗಿದ್ದರಿಂದ ಇವರ ಪತ್ತೆಗಾಗಿ ಪೊಲೀಸರು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ಮೂರು ದಿನ ವಿಚಾರಣೆ ನಡೆಸಿದ್ದಾರೆ.

ಸಿಂಧುವಳ್ಳಿ ಬಳಿಯೇ ಅಪಹರಣಕ್ಕೆ ಯತ್ನ: ಬಂಧಿತ ಆರೋಪಿಗಳು ಕೇರಳದ ಎರ್ನಾಕುಲಂ, ಅಲೆಪ್ಪಿ ಹಾಗೂ ಕೊಟ್ಟಾಯಂ ಮೂಲದವರಾಗಿದ್ದಾರೆ. ಆ.7 ರಂದು ಮೈಸೂರಿಗೆ ಬಂದು ತಂಗಿದ್ದ ಆರೋಪಿಗಳು ಬಾಡಿಗೆ ಅಪಹರಣಕಾರರಾಗಿದ್ದಾರೆ. ಹಿಂದೆಯೂ ಇಂತಹ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಹಣಕ್ಕಾಗಿ ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಶುಕ್ರವಾರ ಇಟಿಯೋಸ್ ಹಾಗೂ ಇನ್ನೊವಾ ಕಾರುಗಳಲ್ಲಿ ದುಷ್ಕರ್ಮಿಗಳು ನಂಜನಗೂಡು ಸಮೀಪದ ಸಿಂಧುವಳ್ಳಿ ಬಳಿ ಇನ್ನೊವಾ ಕಾರನ್ನು ಅಡ್ಡಗಟ್ಟಿದ್ದರೂ ಅಪಹರಣ ಸಾಧ್ಯವಾಗಲಿಲ್ಲ. ನಂತರ ಬೇಗೂರಿನ ಮುಖ್ಯರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ ಅವರನ್ನು ಕೆಳಗಿಳಿಸಿ ವಾಹನವನ್ನು ಅಪಹರಿಸಿದ್ದರು. ಪ್ರಕರಣದಲ್ಲಿ ಸುಮಾರು 14 ಆರೋಪಿಗಳಿದ್ದರೂ ಸದ್ಯ ಕೇವಲ 8 ಜನರನ್ನು ಬಂಧಿಸಲಾಗಿದೆ. ಉಳಿದವರು ಸಿಕ್ಕಲ್ಲಿ ದರೋಡೆಯಾದ ಹಣ ಸಿಗಲಿದೆ ಎಂದು ಹೆಸರು ಬಹಿರಂಗಪಡಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net