

ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿಯ ಸೋಮಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಕಾರನ್ನು ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಕಾರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಕೆಲವೇ ಗಂಟೆಗಳಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.
ಬೆಳಗ್ಗೆ 11 ಗಂಟೆಯಲ್ಲಿ ಕೇರಳದ ಅಶ್ರಫ್ ಹಾಗೂ ಸುಖದೇವ್ ಎಂಬುವರು ಮೈಸೂರಿನಿಂದ ಕೇರಳದತ್ತ ತಮ್ಮ ಹೋಂಡಾ ಸಿಟಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಇಟಿಯಾಸ್ ಹಾಗೂ ಇನ್ನೋವಾ ಕಾರುಗಳಲ್ಲಿ ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿಗಳು ರಸ್ತೆ ಮಧ್ಯದಲ್ಲೇ ಕಾರನ್ನು ಅಡ್ಡಗಟ್ಟಿ ಅದರಲ್ಲಿದ್ದ ಇಬ್ಬರನ್ನು ಹೊರಹಾಕಿ ಕಾರನ್ನು ಅಪಹರಿಸಿದರು.
ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಬೇಗೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ತಾಲೂಕಿನ ಎಲ್ಲ ಠಾಣೆಗಳಿಗೂ ಮಾಹಿತಿ ನೀಡಿ ಸುತ್ತಲು ನಾಕಾ ಬಂದಿ ನಿರ್ಮಿಸಿ ಗಡಿಯನ್ನು ಬಂದ್ ಮಾಡಿಸಿದರು. ಬೇಗೂರು ಠಾಣೆ ಪೊಲೀಸರು ಸೋಮಹಳ್ಳಿ ರಸ್ತೆಯತ್ತ ಕಾರ್ಯಾಚರಣೆಗಿಳಿದರು.
ಕಾರನ್ನು ಅಪಹರಿಸಿ ಪರಾರಿಯಾಗುತ್ತಿದ್ದ ನಾಲ್ವರು ದುಷ್ಕರ್ಮಿಗಳಿದ್ದ ಇನ್ನೋವಾ ಕಾರು ಸೋಮಹಳ್ಳಿ ಬಳಿ ಸೇತುವೆಗೆ ಡಿಕ್ಕಿ ಹೊಡೆಯಿತು. ಯಾವುದೋ ಕಾರು ಅಪಘಾತಕ್ಕೀಡಾಗಿದೆ ಎಂದು ಬಸವನಗುಡಿ ಸಮೀಪ ಕುಳಿತ್ತಿದ್ದ ಗ್ರಾಮದ ನಿರಂಜನ, ಮಣಿಕಂಠ, ಮಹೇಶ್ ಎಂಬ ಯುವಕರು ನೆರವಿಗೆ ಓಡಿ ಬಂದರು. ಆದರೆ ಜನರನ್ನು ಕಂಡ ಕೂಡಲೇ ಕಾರಿನಲ್ಲಿ ಇದ್ದ ದುಷ್ಕರ್ಮಿಗಳು ಪರಾರಿಯಾಗಲು ಯತ್ನಿಸಿದರು.
ಇದರಿಂದ ಅನುಮಾನಗೊಂಡ ಗ್ರಾಮಸ್ಥರು ನಾಲ್ವರನ್ನು ಹಿಡಿದು ಕೂರಿಸಿಕೊಂಡು, ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗುತ್ತಿದ್ದರು. ಅದೇ ವೇಳೆಗೆ ದರೋಡೆಕೋರರನ್ನು ಬೆನ್ನತ್ತಿ ಬಂದ ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದು ಬೇಗೂರು ಪೊಲೀಸ್ ಠಾಣೆಗೆ ಕರೆದೊಯ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ ಭೇಟಿ ನೀಡಿ ಘಟನೆಯ ವಿವರ ಪಡೆದರು.
ಹಣಕ್ಕಾಗಿ ಕಾರು ಅಪಹರಣ : ಕಾರಿನಲ್ಲಿ ಲಕ್ಷಾಂತರ ರೂ. ನಗದು ಇತ್ತು. ಆ ಕಾರಣಕ್ಕಾಗಿ ಕಾರನ್ನು ಅಪಹರಣ ಮಾಡಲಾಗಿದೆ ಎನ್ನಲಾಗುತ್ತಿದ್ದು, ಕಾರು ಹಾಗೂ ಹಣ ಕಳ್ಳತನಕ್ಕೆ 15-20 ಜನರ ದೊಡ್ಡ ಜಾಲವನ್ನೇ ಕಟ್ಟಿಕೊಂಡು ದುಷ್ಕರ್ಮಿಗಳು ಬಂದಿದ್ದರು ಎನ್ನಲಾಗುತ್ತಿದೆ. ಹಣವಿದ್ದ ಕಾರನ್ನು ಅಪಹರಣ ಮಾಡಿದ ಕೂಡಲೇ ಇತರೆ ದುಷ್ಕರ್ಮಿಗಳು ಪರಾರಿಯಾಗಿದ್ದು, ಅಪಘಾತಕ್ಕೀಡಾದ ದುಷ್ಕರ್ಮಿಗಳು ಮಾತ್ರ ಈಗ ಸಿಕ್ಕಿ ಬಿದ್ದಿದ್ದಾರೆ. ಸದ್ಯ ಅಪಹರಣ ಮಾಡಿರುವ ಕಾರು, ಅಪಹರಣಕ್ಕೆ ಬಳಸಿಕೊಂಡಿದ್ದ ಮತ್ತೊಂದು ಕಾರು ಹಾಗೂ ಉಳಿದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹವಾಲ ಜಾಲ: ತಾಲೂಕಿನ ಮಾರ್ಗವಾಗಿ ಸಾಗುವ ಸುಲ್ತಾನ್‌ಬತ್ತೇರಿ ರಸ್ತೆಯು ಅಕ್ರಮ ಸಾಗಣೆಗಳ ಹೆದ್ದಾರಿಯಾಗಿದೆ. ಬೆಂಗಳೂರಿನಿಂದ ತೆರಿಗೆ ಕಟ್ಟದೆ ಕಡಿಮೆ ಬೆಲೆಗೆ ಚಿನ್ನ ಖರೀದಿಸಿ ಸಾಗಿಸುವ ಹಾಗೂ ಹವಾಲಾ ಹಣ ಸಾಗಿಸುವ ಜಾಲ ಸಕ್ರಿಯವಾಗಿದೆ. ಹಣ ಅಥವಾ ಚಿನ್ನ ಸಾಗಿಸುವ ಖಚಿತ ಮಾಹಿತಿ ಮೇರೆಗೆ ದರೋಡೆ, ಅಪಹರಣಗಳು ನಡೆಯುತ್ತಲೇ ಇವೆ.
ಕಳೆದ ಮೂರು ವರ್ಷದ ಹಿಂದೆ ಬೇಗೂರು ಠಾಣೆ ವ್ಯಾಪ್ತಿಯ ಕುರುಬರಹುಂಡಿ ಸಮೀಪ ಸಿನಿಮೀಯ ರೀತಿಯಲ್ಲಿ ಪ್ರಯಾಣಿಕರನ್ನು ಹೊರಹಾಕಿ ಹಣ ಹಾಗೂ ಚಿನ್ನವಿದ್ದ ಕಾರನ್ನು ಅಪಹರಿಸಲಾಗಿತ್ತು. ಕಾರಿನಲ್ಲಿದ್ದವರು ಕೂಡ ಎಷ್ಟು ಹಣ ಮತ್ತು ಚಿನ್ನ ಎಂದು ನಿಖರವಾಗಿ ದೂರು ನೀಡಲಿಲ್ಲ. ಇದರಿಂದ ಆರೋಪಿಗಳು ಕೂಡ ಪತ್ತೆಯಾಗಿಲ್ಲ.
ಕಳೆದ 15 ವರ್ಷಗಳಿಂದ ಸುಮಾರು 25ಕ್ಕೂ ಹೆಚ್ಚಿನ ರಸ್ತೆ ದರೋಡೆ ಪ್ರಕರಣಗಳು ಸಂಭವಿಸಿದ್ದರೂ, ದೂರು ನೀಡುವವರೂ ತಾವು ಕಳೆದುಕೊಂಡ ಸ್ವತ್ತುಗಳ ದಾಖಲೆಗಳನ್ನು ನೀಡುವುದಿಲ್ಲ. ಇದರಿಂದ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.