ಸಿನಿಮಾ, ನಾಟಕದಿಂದ ಮನಪರಿವರ್ತನೆ

04
Published on

ಹುಳಿಯಾರು: ಸಿನಿಮಾ ಮತ್ತು ನಾಟಕಗಳನ್ನು ನೋಡುವುದರಿಂದ ಮನ ಪರಿವರ್ತನೆಯಾಗುತ್ತದೆ. ಸತ್ಯಹರಿಶ್ಚಂದ್ರ ನಾಟಕ ನೋಡಿ ಗಾಂಧೀಜಿ ತಮ್ಮಲ್ಲಿನ ದುಶ್ಚಟಗಳನ್ನು ಬಿಟ್ಟಿದ್ದು ಹಾಗೂ ಬಂಗಾರದ ಮನುಷ್ಯ ನೋಡಿ ಪ್ಯಾಟೆ ಸೇರಿದ್ದ ಯುವ ಸಮೂಹ ಹಳ್ಳಿಗೆ ಬಂದು ಕೃಷಿ ಮಾಡಿದ್ದು ನಿದರ್ಶನವಾಗಿದೆ ಎಂದು

ಚಲನಚಿತ್ರ ನಿಮಾರ್ಪಕ ನಂದಿಹಳ್ಳಿ ಶಿವಣ್ಣ ತಿಳಿಸಿದರು.

ಹುಳಿಯಾರಿನ ಕೋಡಿಪಾಳ್ಯದ ಮಾತಾ ಚಾರಿಟಬಲ್​ ಟ್ರಸ್ಟ್​, ಶ್ರೀ ಅನ್ನದಾನರಂಗಸ್ವಾಮಿ ನಂದಿಹಳ್ಳಿ ಶಿವಣ್ಣ ಇಂಟರ್​ ನ್ಯಾಷನಲ್​ ಮೂವಿ ಪ್ರೊಡಕ್ಷನ್​ ಸಹಯೋಗದಲ್ಲಿ ಹುಳಿಯಾರಿನ ಕೆಪಿಎಸ್​ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಚಲನಚಿತ್ರ ವಿಮರ್ಶೆ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಂಗಳವಾರ ಬಹುಮಾನ ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಇಂದು ವಿವಿಧ ಕಾರಣಗಳಿಗಾಗಿ ಮೊಬೈಲ್​ ಬಳಸುವುದು ಅನಿವಾರ್ಯವಾದ್ದು, ಮೊಬೈಲ್​ ಹಾಗೂ ಮತ್ತಿತರ ಎಲೆಕ್ಟ್ರಾನಿಕ್​ ಸಾಧನಗಳ ಬಳಕೆ ಕುರಿತು ಅಜ್ಞಾನದ ಕಾರಣದಿಂದ ನಾವು ಗೊತ್ತಿಲ್ಲದಂತೆ ಅಪರಾಧ ಹಾಗೂ ಮತ್ತಿತರ ವಂಚನೆಗಳ ಜಾಲದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಮಾತ್ರ ಮೊಬೈಲ್​ ಬಳಕೆ ಸಿಮಿತಗೊಳಿಸಿಕೊಳ್ಳಬೇಕು ಎಂದರು. ಪುಸ್ತಕಗಳು ಮನುಷ್ಯನ ಬದುಕಿಗೆ ದಾರಿದೀಪವಾಗಲಿವೆ. ವಿದ್ಯಾರ್ಥಿಗಳು ದಾರ್ಶನಿಕರು, ಮಹಾತ್ಮರ ಪುಸ್ತಕಗಳನ್ನು ಓದುವುದರಿಂದ ಸೃಜನಶೀಲ ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಗ್ರಂಥಾಲಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಚಲನಚಿತ್ರ ವಿಮರ್ಶೆ ಬರೆಯುವ ಸ್ಪರ್ಧೆಯಲ್ಲಿ ಸಿ.ನಂದಿನಿ, ವಿನುತಾ, ಮಹಾಲಕ್ಷ್ಮೀ, ಪೂಜಾ, ನಯನಾ ಬಹುಮಾನ ಪಡೆದುಕೊಂಡರು. ಚಲನಚಿತ್ರ ನಿಮಾರ್ಪಕ ನಂದಿಹಳ್ಳಿ ಶಿವಣ್ಣ, ಆಯುರ್ವೇದ ವೈದ್ಯ ಕೆ.ಆರ್​.ಬಸವರಾಜ ಪಂಡಿತ್​, ಪ್ರಗತಿಪರ ರೈತ ಪೈಲ್ವಾನ್​ ಜಯಣ್ಣ, ಪಾಚಾರ್ಯ ಜಿ.ಪಿ.ಜ್ಯೋತಿ ವಿಜೇತರಿಗೆ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net