

ಹಾಸನ: ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಹದಿನೇಳೆಂಟು ಸಿನಿಮಾ ಕೇವಲ ಸಂದೇಶ ಸಾರುವ ಚಿತ್ರವಲ್ಲ. ನಮ್ಮ ಸುತ್ತಲೂ ನಿತ್ಯ ನಡೆಯುವ ಕಥೆಯೆಂದು ಚಿತ್ರ ನಿರ್ದೇಶಕ ಪೃಥ್ವಿ ಕೊಣನೂರು ಅವರು ಹೇಳಿದರು.
ಹಾಸನ್ ಫಿಲ್ಮ್ ಸೊಸೈಟಿ, ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಡ್ಲಹಳ್ಳಿ ಪಬ್ಲಿಕೇಷನ್‌ನಿಂದ ನಗರದ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಹದಿನೇಳೆಂಟು ಸಿನೆಮಾ ಪ್ರದರ್ಶನ ಹಾಗು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುತ್ತಲಿನ ಕಥೆಗಳನ್ನೇ ಸಿನೆಮಾ ಮಾಡುವುದು ನನ್ನ ಕ್ರಮ. ಆಸಕ್ತಿ, ಅಭಿರುಚಿಯ ಕಥೆಗಳನ್ನು ಸಿನಿಮಾ ಆಗಿಸುವ ಪ್ರಯತ್ನ ಮಾಡುತ್ತೇನೆಂದರು.
ಜಾತಿಯ ಬಗ್ಗೆ ಸಿನಿಮಾ ಮಾತನಾಡುತ್ತದೆ ಅಂದರೆ ಅದು ಪೂರ್ಣ ಸತ್ಯವಲ್ಲ. ಜಾತಿಯನ್ನು ಮುಖ್ಯ ವೇದಿಕೆಯಲ್ಲಿಟ್ಟು ಸಿನಿಮಾ ಮಾಡುವುದು ಉದ್ದೇಶವಾಗಿರಲಿಲ್ಲ. ಹದಿಹರೆಯದ ವಿದ್ಯಾರ್ಥಿಗಳ ನಡೆ ಹಾಗು ಸಮಾಜದ ನಡುವೆ ಚಲಿಸುವ ಒಂದು ಕಥೆಯಲ್ಲಿ ಜಾತಿಯೂ ಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಾಹಿತಿ ರೂಪ ಹಾಸನ ಅವರು ಮಾತನಾಡಿ, ಮಕ್ಕಳ ಸುರಕ್ಷತೆಯ ಬಗೆಗಿನ ಸಂಗತಿಗಳನ್ನು ಅಧ್ಯಯನ ಮಾಡಿ ಸೂಕ್ಷ್ಮವಾಗಿ ಹದಿನೇಳೆಂಟು ಚಿತ್ರ ರೂಪುಗೊಂಡಿದೆ. ಶಾಲೆ, ಕಾಲೇಜುಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಸರ್ಕಾರ ರೂಪಿಸಿರುವ ವ್ಯವಸ್ಥೆಗಳ ಬಗ್ಗೆ ಗಮನ ಸೆಳೆದರು.
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಸಾವಿತ್ರಿ ಅವರು ಮಾತನಾಡಿ. ಹದಿ ಹರೆಯದಲ್ಲಿ ಮಕ್ಕಳ ಮನಸಿನ ಕುರಿತಾಗಿ ಗಮನ ಇರಬೇಕು. ಹಾಗೆಯೇ ಅದನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಅಂತಹ ಗಂಭೀರ ವಿಚಾರದ ಬಗ್ಗೆ ಹದಿನೇಳೆಂಟು ಸಿನಿಮಾ ಗಟ್ಟಿಯಾಗಿ ಮಾತನಾಡುತ್ತದೆ ಎಂದರು.
ಸಂವಾದದಲ್ಲಿ ವಿಜಯ ಶಾಲೆಯ ತಾರಾ ಸ್ವಾಮಿ, ವತ್ಸಲಾ, ಬಿಜಿವಿಎಸ್‌ನ ಅಹಮದ್ ಹಗರೆ, ದಲಿತ ಮುಖಂಡರಾದ ಹೆಚ್.ಕೆ.ಸಂದೇಶ್, ಸಾಹಿತಿ ಗೊರೂರು ಶಿವೇಶ್, ಧರ್ಮೇಶ್, ಉಷಾ, ಚಿನ್ನೇನಹಳ್ಳಿ ಸ್ವಾಮಿ, ಚಿತ್ರಕಲಾ ಶಿಕ್ಷಕ ಬಿ.ಎಸ್.ದೇಸಾಯಿ, ಸರ್ಕಾರಿ ಇಂಜಿನೀಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಡಿ.ಗಿರೀಶ್ ಹಾಗು ಇತರರಿದ್ದರು.